ಮಾತು

ನಾವಾಡುವ ನುಡಿಯೇ ಕನ್ನಡ ನುಡಿ, 

ಚಿನ್ನದ ನುಡಿ, ಸಿರಿಗನ್ನಡ ನುಡಿ


ಮನಸ್ಸಿನಲ್ಲಿ ಮೂಡುವ ಭಾವನೆಗಳು ಶಬ್ದಗಳ ರೂಪ ಪಡೆದು ಮಾತಾಗಿ ಹೊರ ಹರಿದಾಗ ಕೆಲವೊಮ್ಮೆ ಆನಂದವಾಗಿರುವುದು. ಖುಷಿಯ ಕಾರಣ ಅದಗಿರುತ್ತದೆ. ಅದು ನಮಗಾಗಿರಬಹುದು ಅಥವಾ ಅದನ್ನು ಕೇಳಿದವರಿಗಾಗಿರಬಹುದು. ಆದರೆ ಕೆಲವೊಮ್ಮೆ ಈ ಮಾತುಗಳು ನೋವುಂಟುಮಾಡುತ್ತದೆ. ನಮ್ಮ ಉದ್ದೇಶ ಏನೇ ಇರಬಹುದು ಆದರೆ ಅದನ್ನು ವ್ಯಕ್ತಪಡಿಸುವ ರೀತಿಯೂ ಸಹ ಮುಖ್ಯ‌. ವಿಷಯದ ಸೂಕ್ಷ್ಮತೆಗಳನ್ನು ಅರಿತು ಮಾತಾಡಬೇಕು. ಜೀವನ ಒಬ್ಬರಿಗೆ ಮಾತ್ರ ಸೀಮಿತವಲ್ಲ. ಅದು ನಿಮ್ಮದಾಗಿರಬಹುದು ಅಥವಾ ಬೇರೆಯವರದ್ದಾಗಿರಬಹುದು. 


ಜೀವನವನ್ನು ಸವಿ ಬೇಕೆ ಹೊರತು ಸವೆಸಬಾರದು. ಮಾತು ಸ್ವಚ್ಛವಾಗಿರಲಿ, ಮಾತು ಚೊಕ್ಕವಾಗಿರಲಿ, ಮಾತು ಸ್ಫುಟವಾಗಿರಲಿ, ಮಾತು ನೇರವಾಗಿರಲಿ, ಮುಖ್ಯವಾಗಿ ಮಾತು ನಿಜವಾಗಿರಲಿ ಅದರ ಉದ್ದೇಶ ಶುದ್ಧವಾಗಿರಲಿ. ಉದ್ದೇಶ ನಿಜವಾಗಿದ್ದರೆ ನಿಸ್ಸಂದೇಹವಾಗಿಯೂ ಅದರ ಅರ್ಥ ಕೇಳುಗರ ಮನ ಮುಟ್ಟುತ್ತದೆ. ಒಂದೊಮ್ಮೆ ನಿಮ್ಮ ಉದ್ದೇಶ ಕೆಟ್ಟದಾಗಿದ್ದರೆ ಅಥವಾ ಸುಳ್ಳಾಗಿದ್ದರೆ ಕೇಳುಗನ ಮನ ಮುಟ್ಟದೆ ಮರುಕ್ಷಣವೇ ಕೇಳಿದ ಕಿವಿಯಲ್ಲಿ ಸತ್ತು ಹೋಗುತ್ತದೆ. ಜಗತ್ತು ನಮ್ಮ ನೇರಕ್ಕೆ ಇರಬೇಕು ಎನ್ನುವುದು ತಪ್ಪು ಹಾಗೂ ಅಸಾಧ್ಯ. ನಾವು ನೀವು ಎಲ್ಲರೂ ಒಂದೇ ಹಾಗೂ ಬೇರೆ ಬೇರೆ. ಹೌದು. ನಮ್ಮ-ನಿಮ್ಮ ಒಳಗೆ ಇರುವ ಚೇತನ ಒಂದೇ ಆದರೆ ನಾವು ನೀವು ಧರಿಸುವ ಬಟ್ಟೆ ಬೇರೆಬೇರೆ. ವಿಧವಿಧದ ಬಟ್ಟೆ ಇದ್ದರೆ ತೊಂದರೆಯಲ್ಲ. ಖಂಡಿತವಾಗಿಯೂ ಅದು ಅದ್ಭುತ ಆದರೆ ಬೇರೆ ಬೇರೆ ಮುಖವಾಡ ಇರುವುದು ಅಪರಾಧ. ಅದು ತಪ್ಪು. ಅದು ಅನಾವಶ್ಯಕ. ಮುಖವಾಡ ಧರಿಸಿದವನು ನೂರು ಬಾರಿ ಯೋಚಿಸಿ ಮಾತಾಡಬೇಕು ಆದರೆ ಮುಖವಾಡವೇ ಇಲ್ಲದವನು ಮೂರು ಬಾರಿ ಯೋಚಿಸಿದರೆ ಸಾಕು. ಮಾತೆ ಬಾರದ ಮಗುವಿಗೆ ಮುಖವಾಡವೇ ಗೊತ್ತಿಲ್ಲ. ಸಮಾಜ ಅದಕ್ಕೆ ಮಾತು ಕಲಿಸುತ್ತಾ ಕಲಿಸುತ್ತ ಮುಖವಾಡ ಧರಿಸುವುದನ್ನು ಹೇಳಿಕೊಡುತ್ತದೆ. ಈ ದಿಕ್ಕಿನಲ್ಲಿ ನೋಡಿದರೆ ಮಾತೇ ಬಾರದ ಜೀವಿಗಳೇ ಎಷ್ಟೋ ವಾಸಿ ಎನಿಸುತ್ತದೆ.


ನಾವಾಡುವ ಮಾತು ಒಬ್ಬರಿಗೆ ನೋವುಂಟುಮಾಡಿದರೆ ಅದು ಪಾಪ. ಮಾತನಾಡುವ ಶಕ್ತಿ ದೇವರು ಕೊಟ್ಟಿದ್ದಾನೆ ಎಂದಾದರೆ ಯೋಚಿಸುವ ಶಕ್ತಿಯನ್ನು ದೇವರು ಕೊಟ್ಟಿರುತ್ತಾನೆ. ನಾವಾಡುವ ಮಾತಿನ ಭಾವವನ್ನು ನಮ್ಮನ್ನು ಪ್ರೀತಿಸುವ ಪ್ರಾಣಿ-ಪಕ್ಷಿಗಳಿಗೆ ಅರ್ಥವಾಗುತ್ತದೆ. ನಿಮ್ಮ ಕೋಪವನ್ನು ನೀವು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಸಾಧ್ಯವಾದರೆ ಅದನ್ನು ನಿಮ್ಮಲ್ಲಿಯೇ ಸಾಯಿಸಿ ಬಿಡಿ. ಕೋಪದ ಮಾತು ಕೇಳುಗರಲ್ಲು ಕೋಪ ತರಿಸಬಹುದು. ಅದರಿಂದ ಸಿಗುವ ಫಲ ಒಂದೇ. ಅದುವೇ "ದುಃಖ". ದುಃಖದ ಮಾತು ಸಹ ಬೇಡ. ನಿಮ್ಮ ದುಃಖದ ಮಾತು ಕೆಲವರಿಗೆ ದುಃಖ ತರಿಸಿದರೆ ಇನ್ನು ಕೆಲವರಿಗೆ ಖುಷಿ. ನಿಮ್ಮ ದುಃಖಕ್ಕೆಅನುಕಂಪದ ಎರಡು ಮಾತು ಸಿಗಬಹುದು. ಆದರೆ ದುಃಖದ ಮಾತು ತಪ್ಪಲ್ಲ. ಆದರೆ ಯಾರೊಂದಿಗೆ ಎನ್ನುವುದು ಮುಖ್ಯ. ದುಃಖದ ಮಾತು ಪರರೊಂದಿಗೆ ಬೇಡ. ಸಹೋದ್ಯೋಗಿಗಳೊಂದಿಗೆ ಬೇಡ. ಬಂಧು ಬಳಗದವರೊಂದಿಗೆ, ಅಕ್ಕಪಕ್ಕದವರಿಗೆ ಬೇಡ. ನಿಮ್ಮ ದುಃಖದ ಮಾತು ಕೇವಲ ನಿಮ್ಮ ನಿಜವಾದ ಸ್ನೇಹಿತರೊಂದಿಗೆ ಇರಲಿ. 


ಬಸವಣ್ಣನವರು ಹೇಳುವ ಹಾಗೆ "ಎಲವೋ ಎಂದರೆ ನರಕ, ಅಯ್ಯಾ ಎಂದರೆ ಸ್ವರ್ಗ" ಎಂದು ಮೃದುವಾಗಿ ವಿನಮ್ರವಾಗಿ ವಿನಯದಿಂದ ಮಾತನಾಡಿದರೆ ಎಷ್ಟು ಸೊಗಸು. ಬರಾಕ್ ಒಬಾಮರ ಮಾತಿಗೂ ಒಸಮ ಬಿನ್ ಲಾಡನ್ ಮಾತಿಗೂ ವ್ಯತ್ಯಾಸವಿದೆ. ಒಬಾಮರಿಗೂ ವೈರಿ ಗಳಿದ್ದಾರೆ. ಒಸಮನಿಗೂ ಅಭಿಮಾನಿಗಳಿದ್ದಾರೆ. ನಮ್ಮ ಮಾತು ನಮ್ಮನ್ನು ಬಿಂಬಿಸುತ್ತದೆ. ನಮ್ಮ ಸಂಸ್ಕಾರವನ್ನು ಎತ್ತಿಹಿಡಿಯುತ್ತದೆ. ನಮ್ಮ ಮನೆತನವನ್ನು ತಿಳಿಸುತ್ತದೆ. ನಮ್ಮ ಸ್ವಭಾವವನ್ನು ಇಂಚಿಂಚಾಗಿ ಹೇಳುತ್ತದೆ. ನೀವ್ಯಾರು ಎನ್ನುವುದು ನಿಮ್ಮ ಮಾತು ಉತ್ತರಿಸುತ್ತದೆ. ಮಾತಿಗೆ ಅದರ ಅರ್ಥದ ಆಧಾರದ ಮೇಲೆ ಬೆಲೆ ಕಟ್ಟಬಹುದು. ಆದರೆ ನೆನಪಿಡಿ ಮೌನಕ್ಕೆ ನೀವು ಬೆಲೆ ಕಟ್ಟಲು ಅಸಾಧ್ಯ. ಮಾತು ಬೆಳ್ಳಿ ಮೌನ ಬಂಗಾರ. ಹಿರಿಯರ ಮಾತು ಸುಳ್ಳಲ್ಲ 

"ಮಾತೆ ಮುತ್ತು ಮಾತೆ ಮೃತ್ಯು."


ಇಂತಿ ನಿಮ್ಮ ಪ್ರೀತಿಯ

ಮಹೇಶ್ ಬಿ ಜೋಗಿ


Comments