ನಿಷ್ಕಲ್ಮಶ ನಗು

ಸದಾನಂದ ರವಿ ಹುಟ್ಟಿ ಬೆಳಕಾಗಿ ದಿನ ಶುರುವಾಯಿತು. ನಾನು ಬೆಂಗಳೂರಿಗೆ ಬರುವುದೇ ಮೂರು ತಿಂಗಳಿಗೋ ಆರು ತಿಂಗಳಿಗೊಮ್ಮೆ. ಆ ಬಾರಿ ಚುನಾವಣೆಯಲ್ಲಿ ಮತ ಚಲಾಯಿಸಲು ಬೆಂಗಳೂರಿಗೆ ಬರಬೇಕಾಯಿತು. ಮತ ಚಲಾಯಿಸಿದ್ದು ಆಯಿತು ಸಮೀಕ್ಷೆಗಳನ್ನು  ಮಾಡಿ ನೋಡಿದ್ದೂ ಆಯಿತು. ಆದರೆ ನಾ ಹೇಳಲು ಬಯಸಿರುವ ವಿಷಯ ಬೇರೆಯದ್ದೆ. ಚುನಾವಣೆಯ ಮಾರನೆಯ ದಿನ ಸ್ನೇಹಿತರನ್ನು ಭೇಟಿಯಾಗಲು ಹೊರಟೆ. ನಾವು ಸ್ನೇಹಿತರು ಸೇರುವ ಅಡ್ಡ ಮಂತ್ರಿ ಮಾಲ್. ನಮ್ಮ ಮನೆಯಿಂದ ಮಂತ್ರಿ ಮಾಲ್ ಗೆ ಓಕಲಿಪುರಂ ಹಾದು ಹೋಗಬೇಕು. ಶಂಕರಲಿಂಗ ಪಾಂಡ್ಯನ್ ವೃತ್ತ (ಮಿನರ್ವ ಮಿಲ್) ತಿರುವಿನಲ್ಲಿ ಒಂದು ಮನಕಲಕುವ ದೃಶ್ಯ ಒಂದಿದೆ. ಅಲ್ಲಿ ನಾ ಹೋದಾ ಬಾರಿ ಬಂದಾಗ ಒಂದು ಕುರುಡು ಹುಡುಗಿ ಸಹಾಯಧನಕ್ಕಾಗಿ ಕೈಚಾಚಿ ನಿಂತಿರುವುದನ್ನು ನೋಡಿದೆ. ಪುನಹ ಈ ಬಾರಿಯೂ ಅದೇ ಹುಡುಗಿ, ಆದೇ ಜಾಗದಲ್ಲಿ, ಅದೇ ಸ್ಥಿತಿಯಲ್ಲಿ ಕಂಡು ಮನಸ್ಸಿಗೆ ಭಾರವಾಯಿತು. ಆ ಮುಗದಲ್ಲಿ ಒಂದು ನಿಷ್ಕಲ್ಮಶವಾದ ನಗು ಇತ್ತು. ಅದು ಆ ಮುಗ್ದ ಜೀವಿಗೆ ಸಹಜವಾಗಿ ಬರುತ್ತಿತ್ತೋ ಅಥವಾ ಅನಿವಾರ್ಯತೆ ನಗು ತರಿಸುತ್ತಿತ್ತೋ ನಾ ಕಾಣೆ. ಆದರೆ ಈ ಜಗದ ಕೃತಕ ನಗುವನ್ನೇ ಕಾಣದ ಆ ಕಣ್ಣುಗಳು, ವಿಕೃತವನ್ನೇ ಅರಿಯದ ಆ ಹೃದಯ, ಕೇಡು ಬಯಸುವುದು ಎಂದರೇನು ತಿಳಿಯದ ಬುದ್ಧಿ, ಎಲ್ಲವೂ ನಿಷ್ಕಲ್ಮಶವಾದ ನಗುವಿನಲ್ಲಿ ಕಾಣುತ್ತಿತ್ತು. ಯಾವ ಜನ್ಮದ ಪಾಪದ ಫಲವೋ ಈ ಜನ್ಮದಲ್ಲಿ ವಿಶೇಷ ಚೇತನರಾಗಿ ಹುಟ್ಟಿರುವಳೇ ಅಥವಾ ನಾನೇ ತಪ್ಪು ತಿಳುವಳಿಕೆ ಎಲ್ಲಿರುವೆನೇ? ಯಾರೋ ದೇವಕನ್ಯೆ ಜಗ ಸವಿಯಲು ಕಣ್ಣು ಮುಚ್ಚಿ ಬಂದಿರವಳೇ?

"ಕಣ್ಣಿಲ್ಲದೆಯೂ ಕಾಸು ಕಾಣುವುದು  ಆದರೆ  ಕಾಸಿಲ್ಲದೆ ಹೋದರೆ ಕಣ್ಣು ಕಾಣುವುದಿಲ್ಲ ಈ ಜಗದಲ್ಲಿ."


ಇಂತಿ ನಿಮ್ಮ ಪ್ರೀತಿಯ
ಮಹೇಶ್ ಬಿ ಜೋಗಿ

Comments