"ಕೃಷ್ಣ"

"ಕೃಷ್ಣ"


 || ಶ್ರೀ ಕೃಷ್ಣ ಚೈತನ್ಯ 

ಪ್ರಭೂ ನಿತ್ಯಾನಂದ 

ಶ್ರೀ ಅದ್ವೈತ ಗದಾಧರ

ಶ್ರೀನಿವಾಸಾದಿ ಗೌರಭಕ್ತವೃಂದ ||


"ಕೃಷ್ಣ" ದೇವೋತ್ತಮ ಪರಮಪುರುಷ ಶ್ರೀಕೃಷ್ಣ ಪರಮಾತ್ಮನ ತುಂಟಾಟ, ಲೀಲೆ ಹಾಗೂ ಚಮತ್ಕಾರಗಳನ್ನು ಸಾರುವ ಕಥಾಮೃತಗಳ ಸಂಗ್ರಹ. ಭಕ್ತಿವೇದಾಂತ ಶ್ರೀಲ ಪ್ರಭುಪಾದ ಸ್ವಾಮಿಗಳು ಶ್ರೀ ವ್ಯಾಸ ಮಹರ್ಷಿಗಳು ರಚಿಸಿರುವ ಶ್ರೀಮದ್ಭಾಗವತಂನ ಹತ್ತನೇ ಸ್ಕಂದವನ್ನು ಜನಸಾಮಾನ್ಯರಿಗೂ ತಲುಪುವ ಹಾಗೆ ಸರಳೀಕೃತಗೊಳಿಸಿ ಸುಂದರವಾಗಿ ರಚಿಸಿರುವ ಕೃತಿಯೇ "ಕೃಷ್ಣ". ಶ್ರೀಕೃಷ್ಣ ಯಾರು? ಈ ಪ್ರಶ್ನೆಗೆ ಪರಿಪೂರ್ಣ ಉತ್ತರ ಸಿಗುವುದು ಅಸಾಧ್ಯ. ಶ್ರೀಕೃಷ್ಣನು ಯಾರು ಎನ್ನುವ ಪ್ರಶ್ನೆಗೆ ಜ್ಞಾನಿಗಳು, ಋಷಿ ಮುನಿಗಳು, ಸಿದ್ಧಿಪುರುಷರು, ಆಚಾರ್ಯರು ತಿಳಿದವರು ಹೇಳುವುದು ಅವನು ಪರಮಪುರುಷನೂ ಎಂದರೆ ಪುರುಷರಲ್ಲಿ ಅರ್ಥಾತ್ ಸಕಲ ಜೀವರಾಶಿಗಳಲ್ಲೂ ಪರಮನು, ದೇವೋತ್ತಮನೂ ಎಂದರೆ ದೇವಾನುದೇವತೆಗಳಲ್ಲಿ ಅತಿ ಉತ್ತಮನೂ, ಅಜನ್ಮಿಯೂ ಅರ್ಥಾತ್ ಹುಟ್ಟು ಸಾವಿಲ್ಲದವನೂ, ಸರ್ವಶಕ್ತನೂ, ಸರ್ವವ್ಯಾಪ್ತನೂ ಎಂದು.


ಆದರೂ ಸಹ ಈ ಉತ್ತರಗಳು ಸಂಪೂರ್ಣವಾಗಿ "ಶ್ರೀಕೃಷ್ಣ" ಯಾರು ಎಂಬುದನ್ನು ಹೇಳುವುದಿಲ್ಲ. ಇವು ಶ್ರೀಕೃಷ್ಣನ ಕೆಲವು ಗುಣಗಳು ಹಾಗೂ ಅವನ ಕೆಲವು ವರ್ಣನೆಗಳು ಮಾತ್ರವೇ ಸರಿ. ಅವನ ನಿಜಸ್ವರೂಪ ಅರಿಯಲು ಅಸಾಧ್ಯ. ಆದರೆ ಪರಮ ದಯಾಮಯಿ ದಯಾಸಾಗರ ಶ್ರೀಕೃಷ್ಣನು ನಮ್ಮಂತಹ ಶ್ರೀಸಾಮಾನ್ಯರು ಸಹ ಅವನ ತುಂಟಾಟ, ಲೀಲೆ ಚಮತ್ಕಾರಗಳಲ್ಲಿ ಆನಂದಿಸಲು ದಿವ್ಯವಕಾಶ ನೀಡಿದ್ದಾನೆ. ಅದುವೇ ಎಲ್ಲಿಯಾದರೂ ಯಾವ ಸಮಯದಲ್ಲಾದರೂ. ಹಾಗೆ ಕೃಷ್ಣಲೀಲೆಯಲ್ಲಿ ಆನಂದಿಸಲು ಅನೇಕ ಮಾರ್ಗಗಳಿವೆ. ಆ ದಿವ್ಯ ಮಾರ್ಗಗಳಲ್ಲಿ ಒಂದು ಅವನ ಲೀಲೆಗಳನ್ನು ಓದುವುದು. ಸುಮಾರು ೫೦೦೦ ವರ್ಷಗಳ ಹಿಂದೆ ಶ್ರೀಕೃಷ್ಣನು ಶ್ರೇಷ್ಠ ಭೂಮಿ ಭಾರತದಲ್ಲಿ ಅವತರಿಸಿ ಪುಣ್ಯಭೂಮಿಯನ್ನಾಗಿಸಿದ. ಅವನ ಪ್ರತಿಯೊಂದು ಹೆಜ್ಜೆಯೂ ಅವನ ದಿವ್ಯತೆಯನ್ನು ಸಾರುತ್ತ ಅಸಂಖ್ಯ ಆತ್ಮಗಳನ್ನು ಪರಮಾತ್ಮನೆಡೆಗೆ ಕೊಂಡೊಯ್ದವು. ಸುಮಾರು ೧೨೫ ವಸಂತಗಳ ಕಾಲ ಶಾರೀರಿಕವಾಗಿ ಭೂಮಂಡಲದಲ್ಲಿದ್ದ ಭಗವಂತನೂ ಲೀಲೆ ಚಮತ್ಕಾರಗಳ ಜೊತೆ ಜೊತೆಯಲ್ಲಿಯೇ ತನ್ನದೇ ಸೃಷ್ಟಿಯಾದ ಶ್ರೀಸಾಮಾನ್ಯ ಆತ್ಮವು ಎಷ್ಟೆಲ್ಲಾ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾನೆ. ಹೀಗೆ ಅವನ ಕಥೆಗಳನ್ನು ಕೇಳುವುದು, ಓದುವುದೇ ಆನಂದಮಯ. ಸೃಷ್ಟಿಯನ್ನು ನೋಡಲು ಕಣ್ಣುಗಳು ಬೇಕಿರುವಂತೆಯೇ ಕೃಷ್ಣ ಕಥೆ ಓದಲು ಸಾಮಾನ್ಯರಿಗೆ "ಕೃಷ್ಣ" ಬೇಕೇ ಬೇಕು.


ತಿಳಿದವರು ಹೇಳುವಂತೆ ಶ್ರೀಕೃಷ್ಣನ ಮಧುರ ಕಥೆಗಳನ್ನು ಯಾರು ಕೇಳುತ್ತಾರೆ/ಓದುತ್ತಾರೆ ಎಂದರೇ ಮೂರು ತರಹದ ಜೀವಿಗಳು ಕೇಳಲು ಓದಲು ಉತ್ಸುಕರಾಗಿರುತ್ತಾರೆ. ಎಲ್ಲಾ ಲೌಕಿಕ ಮೋಹವನ್ನು ತ್ಯಜಿಸಿ ಕೃಷ್ಣ ಪ್ರಜ್ಞೆಯಲ್ಲಿ ಭಕ್ತಿಯಿಂದ ಮುಳುಗಿರುವ ಪುಣ್ಯಾತ್ಮರು ಕೃಷ್ಣಮೃತಕ್ಕಾಗಿ ಸದಾ ತುದಿಗಾಲಿನಲ್ಲಿ ನಿಂತಿರುತ್ತಾರೆ. ಲೌಕಿಕ ಮೋಹವನ್ನು ಬಿಡಲಾರದೆ ಆದರೆ ಕೃಷ್ಣನಲ್ಲಿ ಭಕ್ತಿಯಿಟ್ಟು ಈ ಮಾಯೆಯಿಂದ ಮುಕ್ತರಾಗಲು ಕೃಷ್ಣ ಆನಂದಸಾಗರದಲ್ಲಿ ಮುಳುಗಲು ಕೃಷ್ಣ ಲೀಲೆಯನ್ನು ಕೇಳಿ ಓದುವರು‌. ಇನ್ನೂ ಕೆಲವರು ಈ ಮಾಯೆಯ ಪರಿವೇ ಇಲ್ಲದೇ, ಲೌಕಿಕ ಮೋಹವೇ ನಿಜವೆಂದು ಭಾವಿಸಿರುವ ಜೀವಿಗಳು ಅವರದೇ ದೃಷ್ಟಿಕೋಣದಿಂದ ಕೃಷ್ಣಾಮೃತ ಅರ್ಥೈಸಿಕೊಂಡು ಆನಂದಿಸುತ್ತಾರೆ. ಈ ಪೈಕಿ ನಾವು ನೀವುಗಳು ಬಹುಮಂದಿ ಎರಡನೇ ತರಹದ ಅಂದರೇ ಲೌಕಿಕ ಮೋಹದಲ್ಲೇ ಇದ್ದುಕೊಂಡು ಈ ಮಾಯೆಯಿಂದ ಮುಕ್ತಿ ಬಯಸುತ್ತಾ ಕೃಷ್ಣನಲ್ಲಿ ಭಕ್ತಿ ಇಟ್ಟವರು. ಕೃಷ್ಣ ದಯಾಮಯಿ ಅವನೆಡೆಗೆ ನಾವು ಒಂದು ಪುಟ್ಟ ಹೆಜ್ಜೆಯಿನ್ನಿಟ್ಟರು ಅವನು ನಮ್ಮೆಡೆಗೆ ಸಾವಿರ ದಾಪುಗಾಲುಗಳನ್ನು ಹಾಕುತ್ತಾನೆ. ಅವನೆಡೆಗೆ ಒಂದು ಪುಟ್ಟ ಹೆಜ್ಜೆಯೇ ಭಕ್ತಿವೇದಾಂತ ಸ್ವಾಮಿ ಶ್ರೀಲ ಪ್ರಭುಪಾದರ "ಕೃಷ್ಣ"

ಮಹೇಶ್ ಬಿ ಜೋಗಿ
ahamjogi.in
maheshbasavarajujogi@gmail.com

Comments