ಹಳೆ ಕನಸು ಹೊಸ ಹೆಜ್ಜೆ - ಸಂವಿಧಾನ ಸೇರಲಿ ನಮ್ಮ ತುಳು

ಇತ್ತೀಚಿಗೆ ನನ್ನ ಮಿತ್ರನೊಬ್ಬನ ವಾಟ್ಸಪ್ ಸ್ಟೇಟಸ್ ನೋಡಿ ಭಯವಾಯಿತು. ಅದು ಹೀಗಿತ್ತು "ತುಳುಭಾಷೆಯನ್ನು ಕರ್ನಾಟಕದ ಅಧಿಕೃತ ಭಾಷೆಯನ್ನಾಗಿಸಿ... ಇಲ್ಲವೇ ನಮ್ಮ ಮುಂದಿನ ಹೋರಾಟ ತುಳುನಾಡನ್ನು ಪ್ರತ್ಯೇಕ ರಾಜ್ಯವನ್ನಾಗಿಸುವತ್ತ…" ಆ ಕೊನೆಯ "ಸಾಲು ತುಳುನಾಡನ್ನು ಪ್ರತ್ಯೇಕ ರಾಜ್ಯವನ್ನಾಗಿಸುವತ್ತ…" ಎನ್ನುವುದು ನನ್ನನ್ನು "ಇದ್ಯಾರಪ್ಪ ಪ್ರತ್ಯೇಕ ರಾಜ್ಯದ ಕೂಗು ಕೂಗುತ್ತಾ ಇರೋದು" ಅಂತ ಭಯ ಹಾಗೂ ಚಿಂತೆಗೆ ದೂಡಿತು. ವಿಷಯದ ಬಗ್ಗೆ ವಿಚಾರಿಸಿ ಆಲೋಚಿಸಿದ ನಂತರ ಮನಸ್ಸು ಶಾಂತವಾಯಿತು. ತದನಂತರ ಜಾಗೃತವಾಯಿತು. ಕನ್ನಡದ ಗತ್ತೆನಾದರು ಕಮ್ಮಿ ಆಗಬಹುದೇನೋ ಎನ್ನುವ ತಪ್ಪು ಭಾವನೆ ದೂರವಾಯಿತು. ತುಳು ಬಾಂಧವರು ಕೇಳುತ್ತಿರುವುದು ತುಳುವನ್ನು ಕನ್ನಡನಾಡಿನ ಆಡಳಿತ ಭಾಷೆಯನ್ನಾಗಿ ಮಾಡಿ ಅಂತಲ್ಲ ತುಳುವನ್ನು ಕನ್ನಡ ಕರ್ನಾಟಕದ ಅಧಿಕೃತ ಭಾಷೆಯನ್ನಾಗಿ ಘೋಷಿಸಿ ಎಂದಷ್ಟೇ ಎಂದು ಅರ್ಥವಾಯಿತು. ತುಳುವನ್ನು ಕರ್ನಾಟಕದ ಅಧಿಕೃತ ಭಾಷೆಯನ್ನಾಗಿ ಮಾಡುವುದರಲ್ಲಿ ಕಳೆದುಕೊಳ್ಳುವುದು ಏನೂ ಇಲ್ಲ, ಹೆಚ್ಚಿನ ಖರ್ಚು ಇಲ್ಲ ಬದಲಿಗೆ ಲಾಭವಿದೆ. ಲಾಭವಿದೆ ಎನ್ನುವ ಬದಲು ನ್ಯಾಯವಿದೆ ಎನ್ನಬಹುದು. ಭಾರತದ ಸಂವಿಧಾನದಲ್ಲಿ ಅಧಿಕೃತ ಭಾಷೆಗಳಲ್ಲಿ ಒಂದಾಗಿ ಸೇರಿಕೊಳ್ಳಲು ಪೂರಕವಾಗುತ್ತದೆ. ಸುದ್ದಿವಾಹಿನಿಗಳಲ್ಲಿ, ದಿನಪತ್ರಿಕೆಗಲ್ಲಿ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಈ ವಿಚಾರವಾಗಿ ದೊಡ್ಡ ಅಭಿಯಾನಗಳು, ಒಂದೆರಡು ಪುಟಗಳಷ್ಟು ಅಂಕಣಗಳು ವಿಷಯಕ್ಕೆ ಬೆಂಬಲಿಸುವಂತಹ ಸಂಚಿಕೆಗಳು ಮೂಡಿ ಬರಬೇಕಿತ್ತು ಆದರೆ ಅದ್ಯಾವುದು ಹೆಚ್ಚಾಗಿ ಆಗಲಿಲ್ಲ. 


ದೈವಕೃಪೆಯಿಂದ ನಾಲ್ಕು ವರ್ಷಗಳ ನನ್ನ ಇಂಜಿನಿಯರಿಂಗ್ ಅಧ್ಯಯನಕ್ಕೆ ತುಳುನಾಡು ಆಶ್ರಯ ನೀಡಿತ್ತು. ಆ ಮಣ್ಣಿನ ಋಣ ನನ್ನ ಮೇಲಿದೆ.  ಆ ನಾಡಿನ ಋಣವನ್ನು ತೀರಿಸಲು ಸಾಧ್ಯವಿಲ್ಲ. ಬದಲಿಗೆ ತುಳುವಿನ ಸೇವೆ ಮಾಡಲು ಅವಕಾಶ ಸಿಕ್ಕರೆ ಅದುವೇ ನನ್ನ ಪುಣ್ಯ. ಈ ಹೋರಾಟದ ಸಮಯದಲ್ಲಿ ನನ್ನ ಬರಹವೇ ಅಳಿಲುಸೇವೆ ಎಂದು ಭಾವಿಸುತ್ತಾ….


ಬರೆದಿರುವುದು ಒಂದಿಷ್ಟು

ಬರೆಯಬೇಕಾಗಿರುವುದು ಸಾಕಷ್ಟು

ನೀವು ಬರೆದು ಕಳುಹಿಸಿ ಮತ್ತಷ್ಟು

ಆಗಬೇಕಿರುವ ಕೆಲಸಗಳಿವೆ ಸಾಕಷ್ಟು

ನಾವೆಲ್ಲ ಸೇರಿ ಮಾಡೋಣ ಒಂದಿಷ್ಟು

ನಾಡ-ನುಡಿ ಸೇವೆ ದೈವ ಮೆಚ್ಚುವಷ್ಟು


ಸಂವಿಧಾನ ಸೇರಲಿ ನಮ್ಮ ತುಳು


ನಾವು ಕನ್ನಡಿಗರು ಎನ್ನುವ ಮೊದಲು ನಾವು ಭಾರತೀಯರು. ಅಂತೆಯೇ ತುಳುನಾಡಿನವರು ತುಳುವರು ಎನ್ನುವ ಮೊದಲು ಅವರು ಕನ್ನಡಿಗರು. ಇದು ಅವರಿಗೂ ನಮಗೂ ತಿಳಿದ ವಿಚಾರ. ಹಿಂದೆ ಕೆಲ ತುಳುವರು  ಉದ್ಯೋಗ/ಜೀವನ ಅರಿಸಿ ಮುಂಬೈ ಬೆಂಗಳೂರಿನಂತಹ ಮಹಾನಗರಗಳ ಕಡೆ  ಮುಖಮಾಡಿದರು.  ಅಲ್ಲೇ ನೆಲೆಯೂರಿದರು. ಮುಂಬೈನಲ್ಲಿ ಮುಂಬೈಕರ್ ಗಳಂತೆ ಬೆಂಗಳೂರಿನಲ್ಲಿ ಬೆಂಗಳೂರಿಗರಂತೆ  ಅಲ್ಲಿನ ಸ್ಥಳೀಯ ಭಾಷೆ ಸಂಸ್ಕೃತಿ ಸಂಸ್ಕಾರ ಜನ-ಮನ ಗಳನ್ನು ತಿಳಿದು ಅರಿತು ಬಾಳುತ್ತಿದ್ದಾರೆ.   ಇಂದು ತೆರೆದ ಧರ್ಮ ಛತ್ರದಂತಿರುವ ಬೆಂಗಳೂರಿನಲ್ಲಿ "ಮಿನಿ ತಮಿಳುನಾಡಿ"ದೆ "ಮಿನಿ ಆಂಧ್ರ"ವಿದೆ "ಮಿನಿ ರಾಜಸ್ಥಾನ, ಗುಜರಾತ್" ಗಳಿವೆ, ತಲೆಯೆತ್ತಿ ನಿಂತಿರುವ ಕೆಲ ಅಪಾರ್ಟ್ಮೆಂಟ್ ಗಳು "ಮಿನಿ ಕೇರಳ"ದಂತೆ ಗೋಚರಿಸುತ್ತವೆ. ಅಷ್ಟೇ ಏಕೆ "ಮಿನಿ ಪಾಕಿಸ್ತಾನ" ವಲಸೆ ಬಂದಿರುವರ "ಮಿನಿ ಬಾಂಗ್ಲಾ"ಗಳು ಇವೆ. ಆದರೆ ಮಿನಿ ಮಂಗಳೂರಾಗಲಿ ಮಿನಿ ತುಳುನಾಡಾಗಲಿ ಎಲ್ಲೂ ಇಲ್ಲ. ಬದಲಿಗೆ ರುಚಿ ರುಚಿಯಾದ ಮಂಗಳೂರು ಬನ್ಸ್, ಮಂಗಳೂರು ಬಜ್ಜಿ/ಬೋಂಡಾ ಉಡುಪಿ ಹೋಟೆಲ್ ಗಳಲ್ಲಿ ಸಿಕ್ಕರೆ ಮಂಗಳೂರಿನ ಸಮುದ್ರದ ತಾಜಾ ಮೀನುಗಳು ಮಾರ್ಕೆಟ್ ನಲ್ಲಿ ಬೇಡಿಕೆಯಲ್ಲಿವೆ. 



(ಬೆಂಗಳೂರಿಗೆ ಮಾತ್ರವಲ್ಲದೆ ಕನ್ನಡ ನಾಡಿಗೆ ಅನ್ಯ ಭಾಷಿಗರ, ನೆರೆರಾಜ್ಯದವರು ಕೊಡುಗೆಗಳು ಸಾಕಷ್ಟಿದೆ. ಕನ್ನಡಿಗರು ಅವರ ಋಣ ತಿಳಿಸುವುದು ಕಷ್ಟದ ಮಾತು. ಕನ್ನಡ ಮಣ್ಣಿನ ಋಣ ಅವರ ಮೇಲಿದೆ. ಮಣ್ಣಿನ ಋಣ ತೀರಿಸಲು ಸಾಧ್ಯವಿಲ್ಲ. ಕನ್ನಡನಾಡಿನಲ್ಲಿ, ಬೆಂಗಳೂರಿನಲ್ಲಿ ಅನ್ಯರು ಬಂದು ನೆಲೆಸುವುದು ಹೊಸದೇನಲ್ಲ. ಹಿಂದೆಲ್ಲ ಬಂದವರು ನಮ್ಮಲ್ಲಿ ನಮ್ಮವರಾಗಿ ಬಾಳುತ್ತಿದ್ದರು. ಆದರೆ ಈಗ ಬೆಂಗಳೂರಿನಲ್ಲಿ ಮೂಲ ಕನ್ನಡಿಗರ ಸಂಖ್ಯೆ ಅರ್ಧಕ್ಕಿಂತ ಕಡಿಮೆ. ದಶಕಗಳಿಂದ ಕನ್ನಡನಾಡಲ್ಲಿ ಆಶ್ರಯ ಪಡೆದು ಜೀವನಪರ್ಯಂತ ಈ ಭೂ ಸ್ವರ್ಗದಲ್ಲೇ ನೆಲೆಯೂರಲು ಫ್ಲಾಟ್, ಸೈಟು, ಮನೆಗಳನ್ನು ಕೊಂಡುಕೊಂಡರೂ ಕನ್ನಡ ಹಾಗೂ ಕರುನಾಡ ಸಂಸ್ಕೃತಿಯನ್ನು ತಿಳಿಯದ ಹಾಗೂ ತಿಳಿಯಲು ಪ್ರಯತ್ನವನ್ನು ಮಾಡದ ಗಣನೀಯ ಸಂಖ್ಯೆಯಲ್ಲಿರುವ ಕೃತಜ್ಞಹೀನರನ್ನು ಕಂಡಾಗ ಕೋಪ, ರೋಷ, ಅಸಡ್ಡೆ, ನಿರಾಸೆ, ಭಯ, ತಾತ್ಸಾರದ ಭಾವಗಳು ಮೂಡುತ್ತದೆ. ಈ ಚಿತ್ರಣ ಆದಷ್ಟು ಬೇಗ ಬದಲಾಗಲಿ ಎಂದು ತಾಯಿ ಭುವನೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ.)



 


ತುಳುವರು ಬೆಂಗಳೂರಿನಲ್ಲಿ ಕೈಗಾರಿಕಾ ಕ್ಷೇತ್ರ ಬೆಳವಣಿಗೆ ಹಾಗೂ ಹೋಟೆಲ್ ಉದ್ಯಮಕ್ಕೆ ನೀಡಿರುವ ನೀಡುತ್ತಿರುವ ಕೊಡುಗೆ ಅಪಾರ. ಕರ್ನಾಟಕದ ಆರ್ಥಿಕ ಸಬಲೀಕರಣ ವಿಚಾರದಲ್ಲೂ ತುಳುನಾಡಿನ ಶ್ರಮ ಬೆಟ್ಟದಷ್ಟು. ಮನೋರಂಜನೆಯ ಕ್ಷೇತ್ರಕ್ಕೂ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಮನತಣಿಸುವ ಕಲೆ-ಕಲೆಗಾರರನ್ನು ಸುಂದರ-ಸುಂದರಿಯರನ್ನು ತುಳುನಾಡು ನೀಡಿದೆ. ಬೆಂಗಳೂರಿನ ಪೀಣ್ಯದಲ್ಲಿ ಉದ್ಯೋಗ ಸೃಷ್ಟಿಯಾಗಿ ಕೆಲಸ ಸಿಕ್ಕಿದ್ದು ಸ್ಥಳೀಯರಿಗೆ ಹೆಚ್ಚು. ಇಷ್ಟೆಲ್ಲ ಇದ್ದೂ ತುಳುವರು ಮನಸ್ಸು ಮಾಡಿದರೆ ಇಂದು ಬೆಂಗಳೂರಿನ ಪೀಣ್ಯ "ಮಿನಿ ತುಳುನಾಡ್" ಆಗಿ ಬದಲಾಗಬಹುದು. ಆದರೆ ಹಾಗೆ ಆಗದು. ಹಾಲಿನಲ್ಲಿ ಸಕ್ಕರೆ ಇದ್ದಂತೆ ಕನ್ನಡನಾಡಲ್ಲಿ ತುಳುವರು. ಕನ್ನಡನಾಡಿನ ಕೀರ್ತಿಪತಾಕೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಕೈಜೋಡಿಸವವರು. ಇಂತಹ ತುಳುವರ ಸಂಸ್ಕೃತಿ-ಸಂಸ್ಕಾರ ಭಾಷೆ ಸಂಪ್ರದಾಯ ಅವರ ಆಚಾರ-ವಿಚಾರಗಳನ್ನು ನಾವು ಅರಿತು ಬೆರೆತು ಬಾಳಲಿಲ್ಲವೆಂದರೆ ಅದು ಮಹಾಪಾಪ. ತುಳು ಸಂಸ್ಕೃತಿ ಇಲ್ಲೇ ಇದೆ ಪುಣ್ಯಭೂಮಿ ಭರತ ನಾಡು ಕನ್ನಡ ತಾಯಿ ಮಡಿಲಿನಲ್ಲೇ ಹುಟ್ಟಿ ಬೆಳೆದದ್ದು. ಪರಶುರಾಮರ ವರ ತುಳುನಾಡು. ದೈವ ನೀಡಿರುವ ಇಲ್ಲಿನ ಸಂಸ್ಕಾರ ಆಚಾರ-ವಿಚಾರಗಳೆಲ್ಲ ವೈಜ್ಞಾನಿಕ (ಕಾಲ ಕಳೆದಂತೆ ಮನುಷ್ಯನ ಅನುಕೂಲಕ್ಕೆ ಮಾರ್ಪಾಡುಗಳನ್ನು ಕಂಡ ಕೆಲ ಪದ್ಧತಿಗಳು ಅರ್ಥ ಕಳೆದುಕೊಂಡಿರಬಹುದು) ಕನ್ನಡಿಗರು ಎಷ್ಟು ಸಹೃದಯಗಳೊ ಅಷ್ಟೇ ಸಹೃದಯಿಗಳು ಜೊತೆಯಲ್ಲಿ ಚುರುಕಿನ ಜನ ತುಳುವರು. ಯಾಕೆಂದರೆ ಅವರು ಕನ್ನಡಿಗರೇ ಅಲ್ಲವೆ. ಇಂತಹ ವಿರಾಸತ್ತಿನ ನಾಡ ಭಾಷೆಗೆ ಸಿಗಬೇಕಾಗಿರುವ ಕನಿಷ್ಠ ಮಾನ್ಯತೆಯು ಸಿಗಲಿಲ್ಲವೆಂದರೆ ಅದು ಎಷ್ಟು ಶೋಚನೀಯ ಸಂಗತಿಯನ್ನುವುದನ್ನು ನೀವೇ ಯೋಚಿಸಿ. ಸಾವಿರಾರು ಮೈಲಿ ದೂರದಲ್ಲಿ ಹುಟ್ಟಿದ ಭಾಷೆಗಳಿಗೆ ಸಂವಿಧಾನದಲ್ಲಿ ಮಾನ್ಯತೆ ಸಿಕ್ಕಿದೆ. ನಮ್ಮನ್ನು ನಮ್ಮ ಜನ-ಧರ್ಮ-ಕಲೆ-ಸಂಪತ್ತನ್ನು  ಲೂಟಿ ಮಾಡಿದವರ ಭಾಷೆಗಳು ಸಂವಿಧಾನದಲ್ಲಿ ಮಾನ್ಯತೆ ಪಡೆದಿದೆ. ಆದರೆ ವಿಶ್ವದ ಪುರಾತನ ಭಾಷೆಗಳಲ್ಲಿ ಒಂದಾದ ನಮ್ಮ ತುಳುಭಾಷೆಗೆ ಕನಿಷ್ಠ ಮಾನ್ಯತೆಯು ಯಾಕಿಲ್ಲ? ಇದೊಂದು ಲೋಪ. ಇದೊಂದು ಸಮಸ್ಯೆ. ಇದು ತುಳುವರ ಸಮಸ್ಯೆ ಮಾತ್ರವಲ್ಲ. ಇದು ಇಡೀ ಕನ್ನಡನಾಡಿನವರ ಸಮಸ್ಯೆ. ಇದು ತುಳುವರ ಬೇಡಿಕೆ ಮಾತ್ರವಲ್ಲದೆ ವಿಶ್ವದ ಬೇರೆ ಬೇರೆ ಮೂಲೆಗಳಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರ ಕೂಗಾಗಬೇಕು. ಶೀಘ್ರದಲ್ಲೇ ಭಾರತ ದೇಶದ ಸಂವಿಧಾನದಲ್ಲಿ ಅಧಿಕೃತ ಭಾಷೆಗಳಲ್ಲಿ ತುಳು ಕೂಡ ಒಂದಾಗಬೇಕು. ಕರ್ನಾಟಕ ಸರ್ಕಾರವು "ವೋಟ್ ಬ್ಯಾಂಕ್ ರಾಜಕೀಯ" ಗಳನ್ನು ಬಿಟ್ಟು ಬೆಳೆದು ಸಮೃದ್ಧವಾಗಿರುವ ಜಾತಿಗಳಿಗೆ ೫೦೦-೧೦೦೦ ಕೋಟಿಗಳನ್ನು ಕೊಡುವ ಬದಲು ತುಳು ಸಮ್ಮೇಳನಗಳನ್ನು ಮೂರು ಅಥವಾ ಐದು ವರ್ಷಗಳಿಗೊಮ್ಮೆ ಯಾದರೂ ಆಯೋಜನೆ ಮಾಡಬೇಕು ಅಥವಾ ಪ್ರೋತ್ಸಾಹಧನ ನೀಡಬೇಕು. "ತುಳು ಸಂಶೋಧನಾ/ಅಧ್ಯಯನ ಕೇಂದ್ರ"ಗಳನ್ನು, "ತುಳು ಸಾಂಸ್ಕೃತಿಕ ಕೇಂದ್ರ", "ತುಳು ಸಿನಿಮಾ ಅಕಾಡೆಮಿ"ಗಳು ಸ್ಥಾಪಿಸಲಿ. ಇದು ಅತಿಯನಿಸಿದರೂ  ಆಗಬೇಕಾದ ಕೆಲಸಗಳು ಬಹಳಷ್ಟಿದೆ. ರಾಷ್ಟ್ರವಾದದ ಬಗ್ಗೆ ಮಾತನಾಡುವ ಬಲಪಂಥೀಯ ರಾಜಕೀಯ ಪಕ್ಷವೇ ಕೇಂದ್ರ ಹಾಗೂ ರಾಜ್ಯದಲ್ಲಿ ಪ್ರಸ್ತುತ ಅಧಿಕಾರದಲ್ಲಿದೆ. ಈ ನಾಡಿನ ಭಾಷೆಗೆ ಬೆಲೆ ಕೊಡುವುದು ರಾಷ್ಟ್ರವಾದದ ಒಂದು ಭಾಗವೆಂದು ಅರಿತು ಈ ಮಹಾಕಾರ್ಯವನ್ನು ಶರವೇಗದಲ್ಲಿ ಮಾಡಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯ. ಈಗ ತುಳುವರು ಬೇಡಿಕೆ ಹಾಗೂ ಬೆದರಿಕೆ ಎರಡನ್ನು ಇಟ್ಟಿದ್ದಾರೆ. ಬೆದರಿಕೆ ಕೊನೆಯಲ್ಲಿ ಬಳಸುವ ಬ್ರಹ್ಮಾಸ್ತ್ರ ವಾಗಿದ್ದರೆ ಚೆನ್ನಾಗಿರುತ್ತಿತ್ತು. ಇರಲಿ. ಹೋರಾಟದ ಜೋಶಿ ನಲ್ಲಿ ಬ್ರಹ್ಮಾಸ್ತ್ರ ಪ್ರಯೋಗವಾಗಿ ಬಿಟ್ಟಿದೆ. ಕಾಸರಗೋಡನ್ನು ಕಳೆದುಕೊಂಡಿದ್ದೇವೆ. ಬೆಳಗಾವಿಯಲ್ಲಿ ನಿತ್ಯ ಹೋರಾಟದ ಜೀವನ. ಹೊಸೂರು, ಪಾವಗಡ ಹೀಗೆ ಹತ್ತು ಹಲವು ಕಡೆ ನಾಡು-ನುಡಿಯ ಸ್ವಾಭಿಮಾನದ ಹೋರಾಟದ ಚಿತ್ರಣ. ತುಳುವರು ಸಹೃದಯಿಗಳು, ಬೆರೆತು ಬಾಳುವವರು,  ತಿಳಿದವರು, ವಿದ್ಯಾ ಬುದ್ಧಿವಂತರು, ಪ್ರಜ್ಞಾವಂತರು, ಧರ್ಮಿಷ್ಟರು ಎನ್ನುವುದು ಎಷ್ಟು ಸತ್ಯವೋ ತುಳುವರು ಕನ್ನಡಿಗರು ಹಾಗೂ ಸ್ವಾಭಿಮಾನಿಗಳು ಎನ್ನುವುದು ಅಷ್ಟೇ ಸತ್ಯ. ಹಾಗಾಗಿ ಅವರನ್ನು ಬೇಡದ ಸನ್ನಿವೇಶಕ್ಕೆ ನೂಕುವುದು ಬೇಡ. ಕನ್ನಡಿಗರೆಲ್ಲ ಒಂದಾಗಿ ಹೋರಾಡಿ ನಮಗೆ ಸಿಗಬೇಕಾಗಿರುವ ಗೌರವ ಮಾನ್ಯತೆ ಸ್ಥಾನವನ್ನು ಪಡೆಯೋಣ. 


ನಿಮ್ಮವ

ಮಹೇಶ್ ಜೋಗಿ

Comments