ವೀರ ಕನ್ನಡಿಗ ಯುವರತ್ನ
ಜೀವ ಕನ್ನಡ ದೇಹ ಕನ್ನಡ
ಬಾಳು ಕನ್ನಡ ನರವೆಂದವನೇ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನ್ ನೀನಲ್ಲ
ಅಭಿಮಾನವೇ
ನಿನ್ನ ಉಸಿರಾಟವು
ಕರುಣೆ ದಯೆ
ನಿನ್ನ ಸಂಸ್ಕಾರವು
ನಿನ್ನ ಬೆನ್ನ ಹಿಂದೆ ಜನಸಾಗರ
ನೀನವರ ಎದೆಯಲ್ಲಿ ಅಜರಾಮರ
ಕನ್ನಡದ ಮೇರು ನಟ ಪುನೀತ್ ರಾಜಕುಮಾರ್ ಅಕಾಲಿಕ ಮರಣ ರಾಜ್ಯದ ಜನತೆಗೆ ಸಿಡಿಲು ಬಡಿದಂತ ಅನುಭವ ನೀಡಿದೆ. ಸದಾ ನಗುಮುಖದ ಅಪ್ಪು ಕಾಣದಂತೆ ಮಾಯವಾಗಿರುವುದು ಸಿನಿ ಕಲಾರಸಿಕರಿಗೆ ಎಲ್ಲಿಲ್ಲದ ದುಃಖವನ್ನು ಸಂಕಟವನ್ನು ತಂದೊಡ್ಡಿದೆ. ಪವರ್ ಸ್ಟಾರ್ ಇಲ್ಲದ ಕನ್ನಡ ಚಲನಚಿತ್ರರಂಗ ಸಂಪೂರ್ಣ ಪವರ್ಲೆಸ್ ಆಗಿದೆ. ಅಪ್ಪು ಇಹಲೋಕ ಬಿಟ್ಟು ಕೈಲಾಸವನ್ನು ಸೇರಿ ಶಿವಪ್ಪನೊಂದಿಗಿರುವ ರಾಜಣ್ಣನನ್ನು ಅಪ್ಪಿಕೊಂಡು, ತಾಯಿ ಪಾರ್ವತಮ್ಮ ಈ ರಾಜಕುಮಾರನನ್ನು ಮುದ್ದಾಡಿ, ಶಿವಪಾರ್ವತಿಯರಿಗೆ ನಮ್ಮ ಅಪ್ಪು ಭೂಲೋಕದಲ್ಲಿ ನಮ್ಮೆಲ್ಲರ ಮುಖದ ಮೇಲೆ ನಗು ಮನಸ್ಸಿನಲ್ಲಿ ಪ್ರೀತಿ ಅಭಿಮಾನ ಹುಟ್ಟಿಸಿದ ತನ್ನ ಸಿನಿ ಪ್ರಯಾಣದ ಕಥೆಗಳನ್ನು ಹೇಳಿದ ನಂತರ ನಮ್ಮತ್ತ ತಿರುಗಿ ಕೈಲಾಸದಿಂದ ಭೂಲೋಕದ ಸಿನಿ ಪ್ರಪಂಚಕ್ಕೆ ಶುಭಹಾರೈಸಿದಾಗಲೆ ಕಳೆದುಹೋಗಿರುವ ಪವರ್ ಪುನರ್ ಹರಿಯುವುದು.
ಅಪ್ಪುದು ಪುಣ್ಯದ ಸಾವು. ಯಾರ ಕೈಗೂ ಬಿಳಲಿಲ್ಲ. ಯಾರಿಗೂ ಹೊರೆಯಾಗಲಿಲ್ಲ. ದಿನಗಟ್ಟಲೆ ಹಾಸಿಗೆಯ ಮೇಲೆ ನರಳಲಿಲ್ಲ. ಆದರೆ ವಯಸ್ಸು ಮಾತ್ರ ಸಾಯುವ ವಯಸ್ಸಾಗಿರಲಿಲ್ಲ. ನಲವತ್ತಾರು. ಜೀವನ ಸವಿಯುವ ವಯಸ್ಸು. ಇಷ್ಟು ಅವಸರವಸರವಾಗಿ ಪುನೀತ್ ಹೊರಟಿದ್ದನ್ನು ನೋಡಿದರೆ ದಾಸರ "ಬದುಕು ನೀರಿನ ಮೇಲಿರುವ ಗುಳ್ಳೆ" ಎನ್ನುವುದಷ್ಟೇ ನೆನಪಾಗುತ್ತದೆ. ರಾಜ್ಯದ ಜನತೆಗೆ ಇಷ್ಟೇ ಭಾಗ್ಯವಿದ್ದದು ಎಂದುಕೊಂಡು ನಮಗೆ ನಾವೇ ಸಮಾಧಾನ ಮಾಡಿಕೊಳ್ಳಬೇಕಾಗಿದೆ. ಬಾಲ್ಯದಿಂದಲೇ ತನ್ನ ಮುಗ್ಧತೆ ಹಾಗೂ ಮನೋಜ್ಞ ನಟನೆಯಿಂದ ನಮ್ಮೆಲ್ಲರನ್ನು ರಂಜಿಸುತ್ತಾ ಬೆಳೆದಿದ್ದ ಅಪ್ಪು ತನ್ನ ಬಹುತೇಕ ಚಿತ್ರಗಳು ಸರಳ ಸುಂದರ ಸಾಮಾಜಿಕವಾಗಿದ್ದು ಫ್ಯಾಮಿಲಿ ಕ್ಲಾಸಿಕ್ ಗಳನ್ನೇ ಮಾಡುತ್ತಾ ಪವರ್ ಸ್ಟಾರ್ ಆದವರು. ದೇಹ ನಶಿಸಿದ. ಪವರ್ ಈ ಲೋಕ ಬಿಟ್ಟು ಮೇಲೆ ಹೋಗಿದೆ. ಮೇಲಿಂದಲೇ ಅಪ್ಪು ಚಿತ್ರರಂಗಕ್ಕೆ, ಸಮಾಜಮುಖಿ ಸಾಮಾಜಿಕ ಕಾರ್ಯಗಳಿಗೆ ಹಾರೈಸಿ ತನ್ನ ಎಂದಿನ ನಗುಮುಖದಲ್ಲಿ ಪವರ್ ಸಪ್ಲೈ ಮಾಡುತ್ತಾರೆ ಎಂದು ನಂಬಿದ್ದೇನೆ.
ಪವರ್ ಸ್ಟಾರ್ ಕೇವಲ ಸಿನಿಪ್ರಿಯರಿಗೋ, ಅಥವಾ ಚಿತ್ರರಂಗದವರಿಗೊ (ನಟ-ನಟಿ ನಿರ್ಮಾಪಕ-ನಿರ್ದೇಶಕರು…) ಅಥವಾ ಬಿಸಿನೆಸ್ ಪೀಪಲ್ ಗಳಿಗೊ (ಆಡಿಯೋ ಕಂಪನಿ ಮಾಲೀಕರು, ಟಿವಿ ಚಾನೆಲ್ ಮಾಲೀಕರು…) ಇಷ್ಟವಾದವರಲ್ಲ. ಎಲ್ಲರಿಗೂ ಎಲ್ಲ ಕಾಲಕ್ಕೂ ಸಲ್ಲುವ ಕಲಾವಿದರಾಗಿದ್ದರು ಪುನೀತ್ ರಾಜಕುಮಾರ್. ಹೆಚ್ಚೇನು ಸಿನಿಮಾ ಹುಚ್ಚಿಲದ ಹಾಗೊಮ್ಮೆ ಹೀಗೊಮ್ಮೆ ಸಿನಿಮಾ ನೋಡುವ "ಅಪರೂಪದ ಪ್ರೇಕ್ಷಕನಿ"ಗೂ ಎಷ್ಟು ಪ್ರಿಯನೊ ಸಿನಿಮಾದಲ್ಲೇ ಮುಳುಗೇಳುವ ಸಿನಿಮಾ ಕ್ರಿಟಿಕ್ಸ್ ಗಳಿಗಳಿಗೊ ಅಷ್ಟೇ ಪ್ರಿಯ. ತನ್ನದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸುವ ಜೊತೆಗೆ ಕಾಮನ್ ಫ್ಯಾನು ಗಳ ಬಳಗವನ್ನು ಹೊಂದಿದ್ದ ಏಕೈಕ ನಟನೆಂದರೆ ಬಹುಶಃ ಅದು ಅಪ್ಪು ಮಾತ್ರವೇ ಅನಿಸುತ್ತದೆ. ಡಿ ಬಾಸ್ ಅಭಿಮಾನಿಗಳು ಕಿಚ್ಚನ ಅಭಿಮಾನಿಗಳು ಮ್ಯೂಚಲ್ ಆಗಿರುವುದು ಬಹಳ ಬಹಳ ವಿರಳ. ರಾಜಣ್ಣನ ಅಭಿಮಾನಿಗಳು ಹಾಗೂ ವಿಷ್ಣುದಾದಾನ ಅಭಿಮಾನಿಗಳು ಮ್ಯೂಚಲ್ ಇರುವುದು ಕಮ್ಮಿ. ಆದರೆ ಎಲ್ಲರೂ ಎಲ್ಲರನ್ನೂ ಪ್ರೀತಿಸುತ್ತಾರೆ ಗೌರವಿಸುತ್ತಾರೆ. ಆದರೆ ತಮ್ಮ ಅಭಿಮಾನ ಮಾತ್ರ ಯಾರಿಗೊ ಒಬ್ಬರಿಗೆ ಮಾತ್ರ ಮೀಸಲಿಟ್ಟಿರುತ್ತಾರೆ. ಆದರೆ ಅಪ್ಪುಗೆ ಮಾತ್ರ ಹೆಚ್ಚುಕಮ್ಮಿ ತನ್ನ ಅಭಿಮಾನಿಗಳಷ್ಟೇ ಮ್ಯೂಚಲ್ ಅಭಿಮಾನಿಗಳಿದ್ದಾರೆ. ಡಿ ಬಾಸ್ ನ ಡೈ ಹಾರ್ಡ್ ಫ್ಯಾನ್ ಇವರಿಗೂ ಅಭಿಮಾನಿ. ಕಿಚ್ಚನ ಫ್ಯಾನ್ ಗಳು ಇವರಿಗೂ ಫ್ಯಾನ್. ಹೀಗೆ ಎಲ್ಲರ ವಿಶೇಷ ಪ್ರೀತಿ ಗಳಿಸಿದ "ರಾಜಕುಮಾರ" "ನಮ್ಮ ಬಸವ" "ಅಪ್ಪು".
ಪುನೀತ್ ಯಾಕಿಷ್ಟು ಪ್ರೀತಿ ವಿಶ್ವಾಸ ಅಭಿಮಾನ ಗಳಿಸಿದ್ದಾರೆ ಎಂದು ನನಗನಿಸಿದ್ದು ರಾಜಕೀಯವಾಗಲಿ, ಜಾತಿ-ಧರ್ಮದ ವಿಚಾರವಾಗಲಿ, ದುಡ್ಡುಕಾಸಿನ ವಿಚಾರವಾಗಲಿ ಅಪ್ಪು ಯಾವಾಗಲೂ ಡಿಪ್ಲೊಮ್ಯಾಟಿಕ್ ಆಗಿದ್ದರು. ಪೊಲಿಟಿಕಲಿ ನ್ಯೂಟ್ರಲ್ ಆಗಿದ್ದರು. ತಮ್ಮ ಆಚಾರ ವಿಚಾರಗಳನ್ನು ಎಂದಿಗೂ ಬಿಡದೆ ದೇವರು ಪೂಜೆ- ಪುನಸ್ಕಾರಗಳನ್ನು ಮಾಡುತ್ತಾ ಇದ್ದರೂ ಅಪ್ಪು ಎಂದಿಗೂ ಪಬ್ಲಿಕ್ ಲೈಫಿನಲ್ಲಿ ಒಂದು ಜಾತಿಯ ಜೊತೆಯಲ್ಲಿ ಗುರುತಿಸಿಕೊಳ್ಳಲಿಲ್ಲ. ದುಡ್ಡುಕಾಸಿನ ವಿಷಯದಲ್ಲಿ he was a gentleman. ಹುಚ್ಚುಚ್ಚು ಅತಿರೇಕದ ಸಂಭಾವನೆ ಕೇಳಿದ ಮನುಷ್ಯನಲ್ಲ. ಸಂಪಾದಿಸಿದ ಗಣನೀಯ ಪಾಲನ್ನು ದಾನ-ಧರ್ಮ ಸತ್ಕಾರ್ಯದಲ್ಲಿ ವಿನಿಯೋಗಿಸಿದ ಪುಣ್ಯಾತ್ಮ. ಇಷ್ಟರಲ್ಲಿ ಡಿಪ್ಲೊಮ್ಯಾಟಿಕ್ ಆಗಿದ್ದ ನಾಯಕ ಸಂಸ್ಕೃತಿ, ಭಾಷೆ, ನಾಡು-ನುಡಿಯ ವಿಚಾರದಲ್ಲಿ ಸದಾ ಸ್ಥಿರವಾಗಿದ್ದವರು. ಪರ-ಭಾಷಾ ಮೋಹಕ್ಕೆ ಎಂದೂ ಬೀಳಲಿಲ್ಲ. ದುಡ್ಡು ಕೀರ್ತಿ ದಾಹದಿಂದ ಎಂದು ಹಪ ಹಪಿಸಲ್ಲಿಲ. He was a gem of a person. ಹಾಗಾಗಿ ಅಪ್ಪು ರಾಜರತ್ನನಾಗಿ ನಮ್ಮೆಲ್ಲರಿಗೂ ಆದರ್ಶವಾಗಿರುತ್ತಾರೆ.
ತಾಯಿ ಭುವನೇಶ್ವರಿಯ ಮಡಿಲಿನಲ್ಲಿ ಆಡಿದ ಈ ಕಂದನನ್ನು ಕಂಡರೆ ಆ ಕನ್ನಡಾಂಬೆಗೆ ಅದೆಷ್ಟು ಹೆಮ್ಮೆಯೊ, ಭಾರತಾಂಬೆಗೆ ಅದೆಷ್ಟು ಪ್ರೀತಿ-ಅಕ್ಕರೆಯೊ. ಇಂತಹ "ವೀರ ಕನ್ನಡಿಗ" "ಯುವರತ್ನ"ನನ್ನು ಪಡೆದಿರುವ ನಾವು ಕನ್ನಡಿಗರೇ ಧನ್ಯ.
ನಮಸ್ಕಾರ
ನಿಮ್ಮವ
ಮಹೇಶ್ ಬಿ ಜೋಗಿ
Comments
Post a Comment