ಸಮಸ್ಯೆ
ಹತ್ತಾರು ಮಂದಿಗೆ ನೂರಾರು ಸಮಸ್ಯೆಗಳು. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಥರಾವರಿ ಸಮಸ್ಯೆಗಳು. ಸಮಸ್ಯೆಯೇ ಬೇರೆ ಕಷ್ಟವೇ ಬೇರೆ. ಕೆಲ ಸಮಸ್ಯೆಗಳು ಕಷ್ಟವೆನಿಸಬಹುದು. ಕೆಲ ಕಷ್ಟಗಳು ಸಮಸ್ಯೆಗಳನ್ನು ತರಬಹುದು. ಆದರೆ ಸಮಸ್ಯೆ ಹಾಗೂ ಕಷ್ಟಗಳು ಎರಡು ಒಂದೇ ಅಲ್ಲವೇ ಅಲ್ಲ. ವಿದ್ಯಾರ್ಥಿಯೊಬ್ಬ ಬೆಳ್ಳಂಬೆಳಗ್ಗೆ ನಾಲ್ಕಕ್ಕೆ ಎದ್ದು ಪಾಠ ಓದಬೇಕೆಂದರೆ ಕಷ್ಟವೆನಿಸಬಹುದು ಆದರೆ ಅದು ಸಮಸ್ಯೆ ಅಲ್ಲ. ಅದುವೇ ವಿದ್ಯಾರ್ಥಿಯ ಧರ್ಮ. ಯುವಕನೊಬ್ಬ ರಾತ್ರಿ ಕುಡಿದು ಕಾರು ಓಡಿಸುವುದು ಅವನಿಗೆ ಕಷ್ಟದ ಕೆಲಸವೇ ಅಲ್ಲದಿರಬಹುದು, ಆದರೆ ಅದು ಅವನಿಗೆ ಅವನ ಸುತ್ತಲಿನ ಸಮಾಜಕ್ಕೆ ಸಮಸ್ಯೆ. ಸಮಸ್ಯೆಗಳೆಲ್ಲ ಕಷ್ಟ ತರುವುದಿಲ್ಲ, ಕಷ್ಟಕರವಾಗಿರುವುದೂ ಇಲ್ಲ. ಹಾಗೆಯೇ ಎಲ್ಲ ಕಷ್ಟಕರ ಕಾರ್ಯಗಳು ಸಮಸ್ಯೆಗಳಲ್ಲ. ಕಷ್ಟಗಳೇ ಇಲ್ಲದೆ ಕಥೆಗಳು ಇಲ್ಲ. "ಕಷ್ಟ ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತಾ?" ಎನ್ನುವುದು ನಮ್ಮೆಲ್ಲರಿಗೂ ತಿಳಿದ ದಿನನಿತ್ಯ ಬಳಸುವ ಗಾದೆ. ಜೀವನದಲ್ಲಿ ಕಷ್ಟಗಳು ಬರ್ತಾವೆ ಹೋಗ್ತಾವೆ. ಸಮಸ್ಯೆಗಳು ಬರ್ತಾವೆ ಹೋಗ್ತಾವೆ. ಆದರೆ ನಾವುಗಳು ಎಲ್ಲೂ ಎದೆಗುಂದದೆ ಎಲ್ಲೂ ನಿಲ್ಲದೆ ಮುನ್ನುಗ್ಗುತ್ತಿರುವ ಬೇಕು ಅಷ್ಟೇ.
ಸುಮಾರು ವರ್ಷಗಳ ಹಿಂದೆ ಎಲ್ಲೋ ಓದಿದ ಸುದ್ದಿ. ಆ ಸುದ್ದಿಯಲ್ಲಿ ನಮ್ಮೆಲ್ಲರ ಜೀವನಕ್ಕೆ ಪಾಠವಾಗುವಂತಹ ಅಂಶಗಳಿವೆ. ಆ ಸುದ್ದಿ ಹೆಚ್ಚು ಕಮ್ಮಿ ಹೀಗಿತ್ತು...
ಶನಿವಾರ ರಾತ್ರಿ ಕೊಚ್ಚಿಯಲ್ಲಿ ನಡೆದ ಫೆಡರಲ್ ಬ್ಯಾಂಕ್ ಕಾರ್ಯಕ್ರಮವೊಂದರಲ್ಲಿ ದೋಸೆ ಪ್ರಿಯ ಎಂಜಿನಿಯರಿಂಗ್ ವಿದ್ಯಾರ್ಥಿಯ ಪ್ರಶ್ನೆಗೆ ಆರ್‌ಬಿಐ ಗವರ್ನರ್ ಉತ್ತರಿಸುತ್ತಿದ್ದರು.
"ಆರ್‌ಬಿಐ ಹಣದುಬ್ಬರದ ಮೇಲೆ ಜಯ ಸಾಧಿಸುತ್ತಿದೆ" ಎಂದು ಹೇಳುತ್ತಿರುವಾಗ ಎಲ್ಲರೂ ಇಷ್ಟಪಡುವ ದಕ್ಷಿಣ ಭಾರತದ ಖಾದ್ಯ, ದೋಸೆ - ಹೆಚ್ಚಿನ ಬೆಲೆಯನ್ನು ಇನ್ನೂ ಏಕೆ ಮುಂದುವರಿಸುತ್ತಿದೆ? ಎನ್ನುವ ಪ್ರಶ್ನೆ ಎದ್ದಿತು.
"ನಿಜ ಜೀವನದಲ್ಲಿ, ನಾನು ದೋಸೆ ಬೆಲೆಗಳ ಬಗ್ಗೆ ಪ್ರಶ್ನೆಯನ್ನು ಹೊಂದಿದ್ದೇನೆ. ಹಣದುಬ್ಬರ ದರಗಳು ಹೆಚ್ಚಾದಾಗ, ದೋಸೆ ಬೆಲೆಗಳು ಹೆಚ್ಚಾಗುತ್ತವೆ, ಆದರೆ ಹಣದುಬ್ಬರ ದರಗಳು ಕಡಿಮೆಯಾದಾಗ, ದೋಸೆ ಬೆಲೆಗಳು ಕಡಿಮೆಯಾಗುವುದಿಲ್ಲ. ನಮ್ಮ ಪ್ರೀತಿಯ ದೋಸೆಗೆ ಏನಾಗುತ್ತಿದೆ ಸಾರ್?” ಎಂದು ವಿದ್ಯಾರ್ಥಿ ಒಬ್ಬಳು ಕೇಳಿದಳು.
ಅದಕ್ಕೆ ಗವರ್ನರ್ ರಘುರಾಮ್ ರಾಜನ್ ಅದರ ಸಾಂಪ್ರದಾಯಿಕ 'ತವಾ' ತಯಾರಿಕೆಯಿಂದ ತಂತ್ರಜ್ಞಾನದ ನವೀಕರಣಗಳ ಕೊರತೆ ಮತ್ತು ಅದನ್ನು ತಯಾರಿಸುವ ವ್ಯಕ್ತಿಯ ಹೆಚ್ಚಿನ ವೇತನವನ್ನು ದೂಷಿಸುತ್ತಾ...
"ಕಾರ್ಖಾನೆಯ ಕೆಲಸಗಳು, ಬ್ಯಾಂಕಿಂಗ್‌ನಂತಹ ಉತ್ಪಾದಕತೆ ಹೆಚ್ಚಿರುವ ಅನೇಕ ಉತ್ಪಾದಕ ಕ್ಷೇತ್ರಗಳಲ್ಲಿ ನುರಿತ ಕೆಲಸಗಾರರನ್ನು ಬಳಸಿಕೊಳ್ಳಬಹುದು. ಅಲ್ಲಿ ಇಂದು ಅದೇ ಬ್ಯಾಂಕ್ ಗುಮಾಸ್ತರು ತಂತ್ರಜ್ಞಾನದಿಂದಾಗಿ ಇನ್ನೂ ಹೆಚ್ಚಿನ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ, ಏನಾಗುತ್ತದೆ ಎಂದರೆ, ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಮತ್ತು ತಾಂತ್ರಿಕವಾಗಿ ಸುಧಾರಿಸುವ ಕ್ಷೇತ್ರಗಳು ಇದ್ದಾಗ ಇತರ ವಲಯಗಳು ತಮ್ಮ ತಂತ್ರಜ್ಞಾನವನ್ನು ಸುಧಾರಿಸದಿದ್ದರೆ, ತಮ್ಮ ತಂತ್ರಜ್ಞಾನವನ್ನು ಸುಧಾರಿಸದ ವಲಯಗಳಿಂದ ತಯಾರಿಸಿದ ಸರಕುಗಳ ಬೆಲೆಗಳು ವೇಗವಾಗಿ ಹೆಚ್ಚಾಗುತ್ತವೆ. ನೀವು ಅದನ್ನು ದೋಸೆಯ ವಿಷಯದಲ್ಲಿ ನೋಡುತ್ತಿದ್ದೀರಿ" ಎಂದು ಡಾ. ರಾಜನ್ ಹೇಳಿದರು.
“ದೋಸಾಗಳನ್ನು ತಯಾರಿಸುವ ತಂತ್ರಜ್ಞಾನವು ನಿಜವಾಗಿ ಬದಲಾಗಿಲ್ಲ. ಇಂದಿನವರೆಗೂ ಆ ವ್ಯಕ್ತಿಯು ಅದನ್ನು (ದೋಸಾ ಹಿಟ್ಟು) ತವಾ ಮೇಲೆ ಹಾಕುತ್ತಾನೆ, ಸುತ್ತಲೂ ಹರಡುತ್ತಾನೆ ಮತ್ತು ನಂತರ ಅದನ್ನು ತೆಗೆದುಕೊಳ್ಳುತ್ತಾನೆ, ಅಲ್ಲವೇ? ಅಲ್ಲಿ ಯಾವುದೇ ತಾಂತ್ರಿಕ ಸುಧಾರಣೆಯಾಗಿಲ್ಲ.
ಆದಾಗ್ಯೂ, ನೀವು ಆ ಸಂಭಾವಿತ ವ್ಯಕ್ತಿಗೆ (ದೋಸೆ ತಯಾರಿಸುವ ವ್ಯಕ್ತಿ) ಪಾವತಿಸುತ್ತಿರುವ ವೇತನಗಳು, ವಿಶೇಷವಾಗಿ ಕೇರಳದಂತಹ ಹೆಚ್ಚಿನ ವೇತನದ ರೀತಿಯ ರಾಜ್ಯದಲ್ಲಿ, ಎಲ್ಲಾ ಸಮಯದಲ್ಲೂ ಹೆಚ್ಚಾಗುತ್ತಿದೆ" ಎಂದು ಡಾ. ರಾಜನ್ ಉತ್ತರಿಸಿದರು.
ಇಲ್ಲಿ ನಾವು ಪಾಠಗಳನ್ನು ಕಲಿಯಬಹುದು. ಒಂದು: ಯಾವುದೋ ಒಂದು ಸಮಸ್ಯೆ ಇನ್ನೊಂದು ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ಎಂಬುದು ಹಾಗೂ ಎರಡು: ದೃಷ್ಟಿಕೋನ. ನಾವು ಸಮಸ್ಯೆಗಳನ್ನು ನೋಡುವ ರೀತಿ. ಇಲ್ಲಿ ಯಾವುದೋ ಒಂದು ಇಂಡಸ್ಟ್ರಿಯ ಅಪ್ಡೇಟ್ ಆಗದೇ ಉಳಿದ ಕಾರಣ ಮತ್ಯಾವುದೋ ಇಂಡಸ್ಟ್ರಿಯ ಮೇಲೆ ಕೆಟ್ಟ ಪರಿಣಾಮ ಬೀರಿ ಶ್ರೀಸಾಮಾನ್ಯನಿಗೆ ಸಮಸ್ಯೆಯಾಗುತ್ತಿದೆ. ಜೀವನದಲ್ಲಿಯೂ ಹಾಗೆಯೇ ಯಾವುದೊ ಸಮಸ್ಯೆ ಇನ್ಯಾವುದೋ ಸಮಸ್ಯೆಗೆ ಜನ್ಮ ನೀಡುತ್ತದೆ. ಯಾವುದೋ ಗಂಭೀರ ಸಮಸ್ಯೆ ಯಾವುದೊ ಕ್ಷುಲ್ಲಕ ಸಮಸ್ಯೆಯಿಂದ ಹುಟ್ಟಿರುತ್ತದೆ.
ಸಮಸ್ಯೆಯ ಮೂಲ ಹುಡುಕಿ ಅರ್ಥಮಾಡಿಕೊಂಡರೆ ಅರ್ಧ ಸಮಸ್ಯೆ ಸರಿ ಹೋದಂತೆ. ಇನ್ನು ಸಮಸ್ಯೆ ಮೇಲಿನ ನಮ್ಮ ದೃಷ್ಟಿಕೋನದ ಬಗ್ಗೆ ಹೇಳುವುದಾದರೆ ಸಮಸ್ಯೆಯನ್ನು ನಾವು ಹೇಗೆ ನೋಡುತ್ತೇವೋ ಹಾಗೆ ಪರಿಹಾರವು ಸಿಗುತ್ತದೆ. ಸಮಸ್ಯೆಯನ್ನು ಕ್ಲಿಷ್ಟವಾಗಿ ನೋಡಿದರೆ ತಲೆಗೆ ಕ್ಲಿಷ್ಟಕರವಾದ ಪರಿಹಾರವೇ ಹೊಡೆಯುತ್ತದೆ. Out of the box ಯೋಚಿಸುವುದು ಒಳ್ಳೆಯದು. ದೋಸೆ ಬೆಲೆ ಏರಿಕೆಯು ದಿನಸಿ ಸಾಮಗ್ರಿಗಳ, ತರಕಾರಿಗಳ ಬೆಲೆ ಜಾಸ್ತಿಯಿಂದಾಗಿಯೂ, ಇಂಧನದ ಬೆಲೆ ಜಾಸ್ತಿಯಿಂದಾಗಿಯು ಆಗುತ್ತದೆ ನಿಜ. ಆದರೆ ಮಸಾಲದೋಸೆ ಬೆಲೆ ಇಳಿಸಲು ತರಕಾರಿ ಬೆಲೆ, ದಿನಸಿ ಬೆಲೆ, LPG ಬೆಲೆಗಳೇ ಕಮ್ಮಿ ಆಗಬೇಕೆಂದೇನೂ ಇಲ್ಲವಲ್ಲ. ಹಂಚಿನ ದಪ್ಪ ಕಡಿಮೆಮಾಡಿದರೆ ಅದೆಷ್ಟೋ ಎಲ್ಪಿಜಿ ಗ್ಯಾಸ್ ಉಳಿಸಬಹುದು ಅಲ್ಲವೇ…
ಕೆಲವೊಂದು ಸಮಸ್ಯೆಗಳಿಗೆ ಪರಿಹಾರವೇ ಇರುವುದಿಲ್ಲ… ತಪ್ಪು… ತಪ್ಪು… ಕೆಲ ಸಮಸ್ಯೆಗಳು ಸಮಸ್ಯೆಗಳೇ ಅಲ್ಲ. (ಅದು ನಮ್ಮ ಸಮಸ್ಯೆನೇ ಅಲ್ಲ ಅಂತೀನಿ…)
ಸಮಸ್ಯೆಯ ಬಗ್ಗೆ ಒಂದಿಷ್ಟು ಕಥೆಗಳು.
ಅದು ಸಮಸ್ಯೆಯೇ ಅಲ್ಲ.
ಒಂದು ಸಮುದ್ರ. ಆ ಸಮುದ್ರಕೊಂದು ದಡ. ಆ ದಡದಲ್ಲಿ ಲಕ್ಷಾಂತರ ಏಡಿಗಳು. ಅದರಲ್ಲೊಂದು ಪುಟ್ಟ ಮರಿ ಏಡಿ. ಆ ಮರಿ ಏಡಿಗೆ ಪ್ರೀತಿಸುವ ಅಮ್ಮನಿದ್ದಳು. ಅಮ್ಮ ದಿನಾ ಮರಿ ಏಡಿಗೆ "ನೆಟ್ಟಗೆ ನಡಿ" "ನೆಟ್ಟಗೆ ನಡಿ" ಎಂದು ಬೈಯುತ್ತಿದ್ದಳು. ಹೀಗಿರುವಾಗ ಒಂದು ದಿನ ಪಾಪ ಆ ಮರಿ ಏಡಿ ಕೇಳಿಯೇ ಬಿಡ್ತು "ಅಮ್ಮ ನೆಟ್ಟಿಗೆ ಹೇಗಮ್ಮಾ ನಡೆಯೋದು? ತೋರಿಸಿ ಕೊಡಮ್ಮ…" ಎಂದು. ಅಮ್ಮ ನಡೆದು ತೋರಿಸೋಕೆ ಹೋದರೆ ಅವಳು ಸೊಟ್ಟವಾಗಿಯೇ ನಡೆದಳು. ನಮ್ಮಗಳಿಗೂ ಹಾಗೇ. ಬೇರೆಯವರ ಸಮಸ್ಯೆಗಳು/ ಲೋಪಗಳು ಎದ್ದು ಕಾಣ್ತಾವೆ. ಆದರೆ ನಮ್ಮ ದೋಷಗಳು ನಮ್ಮ ಅರಿವಿಗೆ ಇರೋಲ್ಲ…ವಿಪರ್ಯಾಸ. ಆದರೆ ಅದೆಷ್ಟೋ ವಿಷಯಗಳಲ್ಲಿ ಸಮಸ್ಯೆಗಳು ಸಮಸ್ಯೆಗಳೇ ಅಲ್ಲ. ಏಡಿ ತಾನು ಸೊಟ್ಟ ನಡೆಯೋದು ಸಮಸ್ಯೆ ಅಂತ ಅಂದುಕೊಂಡರೆ ಅದು ಸಮಸ್ಯೆ. ಆದರೆ ಅದುವೇ ನನ್ನ ಗುಣ ಅನ್ಕೊಂಡ್ರೆ ಅದುವೇ ಜ್ಞಾನೋದಯ. ಲೆಕ್ಕದಲ್ಲಿ ಅದು ಅದರ ಗುಣವೇ ಹೊರೆತು ಸಮಸ್ಯೆ ಅಲ್ಲವೇ ಅಲ್ಲ. ನಾವುಗಳು ಕೆಲ ವಿಚಾರಗಳಲ್ಲಿ ಏಡಿಗಳ ಹಾಗೆಯೇ. ಎರಡೂ ಕಿವಿಗಳ ಮಧ್ಯೆ ತಲೆಯಾಕಿದೆ, ಮೂಗಿನ ಕೆಳಗೆ ಬಾಯಾಕಿದೆ ಅಂತೆಲ ಇಲ್ಲದೆ ಇರುವ ಸಮಸ್ಯೆಗಳ ಬಗ್ಗೆ ಚಿಂತಿಸುತ್ತಾ ಇರ್ತಿವಿ. ಕೀಳರಿಮೆಯಿಂದ ಹೊರಬರಬೇಕಷ್ಟೇ.
ಕೆಲವೊಮ್ಮೆ ಸಮಸ್ಯೆ ನಮ್ಮಲ್ಲಿಯೇ ಇರುತ್ತದೆ.
ಬಾಲ್ಯದ ಸ್ನೇಹಿತರಿಬ್ಬರು ಬಹಳ ವರ್ಷಗಳ ನಂತರ ಭೇಟಿಯಾದರು. ಒಬ್ಬ ದೊಡ್ಡ ಉದ್ಯಮಿ ಇನ್ನೊಬ್ಬ ಸುಪ್ರಸಿದ್ಧ ಕಿವಿ ಸ್ಪೆಷಲಿಸ್ಟ್. ಇಬ್ಬರೂ ಮಾತಿಗಿಳಿದರು. ಬಾಲ್ಯದ ಸವಿನೆನಪೆಲ್ಲ ಮೆಲುಕು ಹಾಕಿದರು. ಒಂದೆರಡು ಗಂಟೆಗಳ ಹರಟೆಯ ನಂತರ ಉದ್ಯಮಿ ಹೇಳಿದ "ಒಂದೆರಡು ತಿಂಗಳುಗಳಿಂದ ಮನೆಯಲ್ಲಿ ಒಂದು ಸಣ್ಣ ಸಮಸ್ಯೆ ಕಣಯ್ಯ."
"ಅದೇನದು" ಅಂದ್ರು ಡಾಕ್ಟ್ರು.
"ಅಯ್ಯೋ ನನ್ ಹೆಂಡ್ತಿಗೆ ಸರಿಯಾಗಿ ಕಿವಿ ಕೇಳುಸ್ತಾ ಇಲ್ಲ ಕಣೋ."
"ಅಷ್ಟೇ ತಾನೇ ಆಸ್ಪತ್ರೆಗೆ ಕರ್ಕೊಂಡ್ ಬಾರೊ"
"ನಿನಗೆ ಕಿವಿ ಚೆಕ್ ಮಾಡ್ಸಬೇಕು ಅಂದ್ರೆ ನನ್ ತಿಥಿ ಮಾಡಿರ್ತಾಳೆ. ಅವಳಿಗೆ ಕಿವಿ ಸಮಸ್ಯೆ ಇದೆ ಅಂತ ಅವಳಿಗೆ ಹೇಳಕ್ಕಾಗಲ್ಲಪ್ಪ. ಬೇರೆ ಏನಾದರೂ ಪರಿಹಾರ ಇದ್ರೆ ಹೇಳೋ."
"ಒಂದು ಕೆಲಸ ಮಾಡು. ಇವತ್ತು ರಾತ್ರಿ ಮನೆಗೆ ಹೋಗಿ ನಿನ್ನ ಹೆಂಡತಿಯಿಂದ ಮೂವತ್ತಡಿ ದೂರ ನಿಲ್ಲು. ಏನಾದ್ರೂ ಮಾತಾಡು. Response ಬರಲಿಲ್ಲ ಅಂದ್ರೆ ಮುಂದೆ ಹೋಗಿ ಇಪ್ಪತ್ತಡಿ ದೂರದಿಂದ ಮಾತಾಡಿಸು. ಆಗಲೂ Response ಬರಲಿಲ್ಲ ಅಂದ್ರೆ ಹತ್ತಡಿಯಿಂದ ಮಾತಾಡ್ಸು. ಇವಾಗ್ಲೂ Response ಬರಲಿಲ್ಲ ಅಂದ್ರೆ ನಿನ್ನ ತಿಥಿನಾದ್ರೂ ಮಾಡಿಸ್ಕೊಂಡು ಆಸ್ಪತ್ರೆಗೆ ಕರ್ಕೊಂಡು ಬಾ."
"ಸರಿ ಕಣೋ" ಎಂದು ಉದ್ಯಮಿ ಮನೆ ಕಡೆ ಹೆಜ್ಜೆ ಹಾಕಿದ.
ಮನೆಗೆ ಬಂದವನೇ ಪ್ರಯೋಗಕ್ಕೆ ನಿಂತ. ಅಡುಗೆಮನೆಯಲ್ಲಿದ್ದ ಹೆಂಡತಿಯಿಂದ ಮೂವತ್ತಡಿ ದೂರ ನಿಂತು ಕೂಗಿದ "ಅಡುಗೆ ಆಯ್ತಾ… ಊಟಕ್ಕೆ ಬರ್ಲಾ?" ಉದ್ಯಮಿಗೆ Response ಬರಲಿಲ್ಲ. 20 ಅಡಿಯಿಂದ ಮತ್ತದೇ ಪ್ರಶ್ನೆ ಮತ್ತದೇ no Response. ಕೊನೆಗೆ ಹತ್ತಡಿ ಯಿಂದ ಜೋರಾಗಿ "ಅಡುಗೆ ಆಯ್ತಾ… ಊಟಕ್ಕೆ ಬರ್ಲಾ?" ಅಂದ್ರು ಉದ್ಯಮಿ. ಚಪಾತಿ ಲಟ್ಟಿಸುತ್ತಿದ್ದ ಹೆಂಡತಿ ತಿರುಗಿ ಲಟ್ಟಣಿಗೆಯಿಂದ ಪತಿರಾಯನ ತಲೆಗೆ ಸರಿಯಾಗಿ ಒಂದು ಕೊಟ್ಟು ಅಂದ್ಲು "ಇನ್ನೊಂದು ಐದು ನಿಮಿಷ ಅಂತ ಎಷ್ಟು ಸರಿ ಹೇಳ್ಲಿ. ಎರಡು ತಿಂಗಳಿಂದ ನಿಮ್ ಕಿವಿಯಲ್ಲಿ ಅದೇನೋ ಇಟ್ಕೊಂಡಿದಿರೊ..."
ಇನ್ನೊಬ್ಬರಲ್ಲಿ ಸಮಸ್ಯೆಯಿದೆ ಅನ್ಕೊತಿವಿ. ಆದರೆ ಸಮಸ್ಯೆ ನಮ್ಮಲ್ಲೂ ಇರಬಹುದಲ್ಲ ಅನ್ನೋದನ್ನೇ ಮರೆತಿವೆ.
ನಮ್ಮ ಸಮಸ್ಯೆಗಳೇ ದೊಡ್ಡವು. ನಮ್ಮ ಸಮಸ್ಯೆಗಳೇ ಚಿಕ್ಕವು.
ಒಮ್ಮೆ ಹೀಗೊಂದು ಘಟನೆ ನಡೆಯಿತು. ಸ್ನೇಹಿತರ ಗುಂಪೊಂದು ತಮ್ಮ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಲು ದುಂಡುಮೇಜಿನ ಸಭೆ ಸೇರಿದರು. ಎಲ್ಲರೂ ಅವರವರ ಸಮಸ್ಯೆಗಳನ್ನು ಮೇಜಿನ ಮೇಲಿಟ್ಟು "ನಂದೇ ದೊಡ್ಡ ಸಮಸ್ಯೆ" ಎಂದು ಗೋಳಾಟ ಶುರುಮಾಡಿದರು. ಮುಂದೆ ಸಾಗಿ "ನನ್ನ ಸಮಸ್ಯೆ ಮುಂದೆ ನಿಂದು ಸಮಸ್ಯೆನೇ ಅಲ್ಲ. ನಾನಾಗಿದ್ದರೆ ಎರಡೇ ಎರಡು ನಿಮಿಷದಲ್ಲಿ solve ಮಾಡ್ಕೊತಾ ಇದ್ದೆ." ಅನ್ನೋದು ಶುರುವಾಯಿತು. ಕೊನೆಗೆ ಅವರ ಸಮಸ್ಯೆನ ಇವರುಗಳು ಇವರ ಸಮಸ್ಯೆಯನ್ನು ಅವರುಗಳು ಹೀಗೆ ಎಲ್ಲರ ಸಮಸ್ಯೆಗಳನ್ನು ಅದ್ಲು ಬದ್ಲು ಮಾಡ್ಕೊಂಡು ಖುಷಿಯಿಂದ ಮನೆಗೆ ಹೋದರು. "ನನ್ನ ದೊಡ್ಡ ಸಮಸ್ಯೆ ಹೋಗಿ ಚಿಕ್ಕ ಸಮಸ್ಯೆ ಸಿಕ್ಕಿದೆ. ಇದನ್ನ easyಯಾಗಿ solve ಮಾಡ್ಕೊತೀನಿ" ಅಂದ್ಕೊಂಡ ಹೋದ ಸ್ನೇಹಿತರ ಗುಂಪು ಒಂದೇ ವಾರಕ್ಕೆ ಮತ್ತೆ ದುಂಡುಮೇಜಿನ ಸಭೆ ಸೇರಿತ್ತು. ಎಲ್ಲರೂ ಹೇಳಿದ್ದು ಕೇಳಿದ್ದು ಒಂದೇ - "ನಮ್ಮ ನಮ್ಮ ಸಮಸ್ಯೆನ ನಮಗೆ ವಾಪಸ್ ಕೊಟ್ಟ್ ಬಿಡ್ರಪ್ಪ. ಅದೇ ಎಷ್ಟೋ ಚೆನ್ನಾಗಿತ್ತು ಚಿಕ್ಕದಾಗಿತ್ತು. ಈ ಹೊಸ ಸಮಸ್ಯೆ ಸವಸವೇ ಬೇಡ."
ಅವರವರ ಸಮಸ್ಯೆಗಳು ಅವರವರಿಗೆ ದೊಡ್ದು. ಬೇರೆಯವರ ಸಮಸ್ಯೆಗಳು ಮಾತ್ರ ಚಿಕ್ಕುದು. ಆದರೆ ವಿಷ್ಯ ಎನು ಗೊತ್ತಾ? ಸಮಸ್ಯೆನ ನಾವು ದೊಡ್ದು ಅಂದ್ಕೊಂಡ್ರೆ ಅದು ತುಂಬಾ ದೊಡ್ದು. ಸಮಸ್ಯೆ ಚಿಕ್ಕದು ಅಂತ ಭಾವಿಸಿದರೆ ಅದು ಖಂಡಿತ ಚಿಕ್ಕದು.
(ಹಾಗಂತ ಬೇಜವಾಬ್ದಾರಿ ಬೇಡ ಆಯ್ತಾ…)
ನಿಮ್ಮವ
ಲೇಖನ ಚೆನ್ನಾಗಿದೆ ಕೊನೆಗೆ ನಮಗೆ ಅನಿಸುತ್ತದೆ. ಸಮಸ್ಯೆ ಎನ್ನುವುದು ಸಮಸ್ಯೆಯಾಗಿ ಉಳಿಯುತ್ತದೆ
ReplyDelete