ಕಾಳಜಿ
ತಂದೆ ತಾಯೆ ದೈವ ಗುರುವೇ ನಮ್ಮ ಜೀವ
ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು......
ಸಿನಿ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿಯುವ "ಓಂ" ಚಿತ್ರದ, ರಾಜಣ್ಣ ಹಾಡಿರುವ ಹಾಡಿನ ಸಾಲುಗಳು.
ಮಧ್ಯರಾತ್ರಿ ಒಂದು ಗಂಟೆ. ಅಪ್ಪ ಅಮ್ಮನಿಗೆ ೨೭ನೇ wedding anniversary wishes ಕಳಿಸಿದ ನನಗೆ ಈ "ಕಾಳಜಿ" ಬರೆಯಬೇಕೆಂಬ ಪ್ರೇರಣೆಯಾಯಿತು.
ಅಂದೊಂದು ದಿನ ನನ್ನ ಗುಂಡಿಗೆಯೇ ಬಾಯಿಗೆ ಬಂದಂತಾಗಿತ್ತು. ನಾನು ಆ ಸಂಜೆಯ ಬಾಷ್ಯಂ ಸರ್ಕಲ್ನಲ್ಲಿ ಇದ್ದೆ. In case ನಿಮಗೆ ಬಾಷ್ಯಂ ಸರ್ಕಲ್ ಬಗ್ಗೆ ಗೊತ್ತಿಲ್ಲದಿದ್ದರೆ ಸಿಂಪಲ್ ಆಗಿ ಹೇಳೊದಾದರೆ "ಬಾಷ್ಯಂ ಸರ್ಕಲ್ " ಅಂದರೆ ಬೆಂಗಳೂರಿನ ಬೆಡಗಿಯರೆಲ್ಲರು ಅಲ್ಲೇ ಇರೋದೇನೊ ಅಂತ ಅನಿಸುವಂತಹ weekend shopping area. ರಾಜಾಜಿನಗರದಲ್ಲಿರೊ ರಸಿಕರ ರಾಜ ಡಾ.ರಾಜ್ ಕುಮಾರ್ ರಸ್ತೆ ಮೇಲೆ ಹೋಗಿ ಸ್ವಲ್ಪ ಮುಂದೆ ಹೋದ್ರೆ ಅಲ್ಲೇ ಅದೇ ಭಾಷ್ಯಂ ವೃತ್ತ. ದಶಕದ ಹಿಂದೆ ವಾರವಾರವೂ ನಾನು ಓಡಾಡ್ತಾ ಇದ್ದ ಜಾಗವದು. ಅಲ್ಲಿ ಯಾರೊ ಕೇರಳ ಕುಟ್ಟಿಯ supermarket ಇತ್ತು, MTR ಹೋಟೆಲ್ ಇತ್ತು, ಬೀಳಿ ತಾತನ ಐಸ್ ಕ್ರೀಮ್ ಶಾಪ್ ಇತ್ತು. ಇನ್ನೂ ಏನೇನೋ ಇದ್ದವು. ಆದರೆ ಈಗಿಲ್ಲ. ಈಗ ಪುಣ್ಯಕ್ಕೆ ಬಾಟಾ ಶೋ ರೂಮ್ ಹಾಗೇ ಇದೆ, ಶಾಂತಿ ಸಾಗರ್ ಹೋಟಲ್ ಕೂಡ ಅಲ್ಲೇ ಇದೆ (ಆದರೆ ರುಚಿ ಮಾತ್ರ ಕೊಂಚ ಬದಲಾಗಿದೆ ಅನುಸುತ್ತೆ). ಅದೇ ಹಳೆ ಸೇಠುಗಳ ಪಾತ್ರೆ ಪಗಡೆಗಳ ಅಂಗಡಿಗಳಿವೆ. ಅದೇ ರಾಜಸ್ಥಾನಿಗಳ ಬಟ್ಟೆ ಅಂಗಡಿಗಳಿವೆ. ಹಾಗೂ ಇನ್ನು ಕೆಲವು ಮನೆ, ಅಂಗಡಿ, ಕಟ್ಟಡಗಳು ಬದಲಾಗಿದ್ದರು ಬದಲಾಗದಂತೆ ಗೋಚರಿಸುತ್ತವೆ. ಹೊಸ ಹೊಸ ಸೇರ್ಪಡೆಗಳೂ ಆಗಿವೆ. ಈ ತುದಿಯಲ್ಲಿದ್ದ MTR ಹೋಟಲ್ ಬದಲು ಈಗ ಆ ತುದಿಯಲ್ಲಿ MTR Products ಗಳ ಶೋ ರೂಮ್ ಇದೆ. ನಾನು ಓಡಾಡ್ತ ಇದ್ದ ಓಬಿರಾಯನ ಕಾಲದಲ್ಲಿ ಬೆಂಗಳೂರಿನ ಪರಮ ಸುಂದರಿಯರೆಲ್ಲ weekend ಗಳಲ್ಲಿ ಅಲ್ಲೇ ಸೇರುತ್ತಿದ್ದರು. ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಓಡಾಡ್ತ shopping ಮಾಡೋರು. ಈಗ ಆ ಸುಂದರಿಯರಿಗೆಲ್ಲ ಪುಟ್ಟ ಪರಮ್ ಹಾಗೂ ಪುಟ್ಟಾಣಿ ಪರಮ ಸುಂದರಿ ಹುಟ್ಟಿರಬೇಕು. ಈಗ ಬಾಷ್ಯಂ ಸರ್ಕಲ್ ನ ವಸ್ತುಸ್ಥಿತಿ ಹೇಗಿದೆ ಎಂದು ಹೆಚ್ಚಾಗಿ ಗೊತ್ತಿಲ್ಲ. ನಿವೇನಾದರು ಕುತೂಹಲ ಉತ್ಸಹದಿಂದ ಹೋಗಿ, ಆ ಗತಕಾಲದ ವೈಭವ ನಿಮಗೆ ಕಾಣದಿದ್ದರೆ ನನನ್ನು ದೂಷಿಸಬೇಡಿ ಶಪಿಸಬೇಡಿ. ಇರಲಿ. ನಾನು ಆ ಸಂಜೆ ಬಾಷ್ಯಂ ಸರ್ಕಲ್ ನಲ್ಲಿದ್ದೆ. ನಾನು ನಮ್ಮಪ್ಪ city rounds ಮುಗಿಸಿ ಮನೆಗೆ ಹಿಂತಿರುವಾಗ ಚೌ ಚೌ ಹಾಗೂ ಬಜ್ಜಿ ಬೋಂಡಾ ಕೊಳ್ಳಲು ನಿಂತೆವು. ನಮ್ಮನೆ ಇರೋದು ಮಾಗಡಿ ರೋಡ್ ಕೆ.ಪಿ.ಅಗ್ರಹಾರದಲ್ಲಿ. ಹಾಗಾಗಿ ಮನೆಗೆ ಹೋಗಲು ಭಾಷ್ಯಂ ಸರ್ಕಲ್ ನ ಶುರುವಿನಲ್ಲೇ ಇರೊ ದಿಬ್ಬವನ್ನು ಇಳಿಬೇಕು. ( Circle ಗೆ ಯಾವುದು ಶುರು ಯಾವುದು ಕೊನೆ? ಎಲ್ಲಾ ನಮ್ಮ ನಮ್ಮ ದೃಷ್ಠಿ ಕೊಣ ಹಾಗೂ ನಮ್ಮ ನಮ್ಮ ಸೌಕರ್ಯಕ್ಕೆ ತಕ್ಕಂತೆ. ಅಲ್ವೇ ?)
ದಿಬ್ಬದ ಬಲಗಡೆಯೇ ಕುರುಕಲು ತಿಂಡಿಯ ಅಂಗಡಿ. ಅಪ್ಪ ಗಾಡಿನ ಸೈಡ್ಗೆ (ತುಂಬಾನೇ ಸೈಡಿಗೆ) ನಿಲ್ಲಿಸಿದರು. ನಾನು ಬೈಕ್ ಇಳಿದು ರಸ್ತೆ ದಾಟಿ ಐವತ್ತು ರೂಪಾಯಿಗೆ ಚೌಚೌ ಇಪ್ಪತ್ತು ರೂಪಾಯಿಗೆ ಬೋಂಡಾ ಬಜ್ಜಿ ತಗೊಂಡೆ. (ಹೌದು, ನಮ್ಮ ಕಾಲದಲ್ಲಿ ಅಂದರೆ ಓಬಿರಾಯನ ಕಾಲದಲ್ಲಿ ಇಪ್ಪತ್ತು ರೂಪಾಯಿಗೆ ಎಂಟು ಹತ್ತು ಬೋಂಡ ಬಜ್ಜಿ ವಡೆಗಳು ಕೊಡೋರು. ಈಗಿನ ಥರ ಬೋಂಡಾ ಬಜ್ಜಿಯ ಗಮಾ ಹಿರೋಕೂ ದುಡ್ಡು ಕೊಡಬೇಕಾಗಿರಲಿಲ್ಲ. ಆಗ ಅಡುಗೆ ಎಣ್ಣೆ ಗಗನದಲ್ಲಿ ಓಡಾಡ್ತಾ ಇರಲಿಲ್ಲ. ನಮ್ಮ ನಿಮ್ಮ ಹಾಗೆ ರಸ್ತೆಯಲ್ಲೇ ಓಡಾಡ್ತಾ ಇತ್ತು, ಅದೆಷ್ಟೋ ಜನ ಎಣ್ಣೆಲೆ ಕೈ ತೊಳೆಯೋರು ಅಂತೀನಿ…) ಇನ್ನೂ ಮೂವತ್ತು ರುಪಾಯಿಗೆ ಕಡಲೆಕಾಯಿ ಬರ್ಫಿ ಕೊಬ್ಬರಿ ಬರ್ಫಿ ತೊಗೊಂಡೆ. ಹಿಂದೆ ತಿರುಗಿ ರಸ್ತೆ ದಾಟಲು ನಿಂತ್ರೆ ಗುಂಡಿಗೆನೇ ಬಾಯಿಗೆ ಬಂದಂತಾಯಿತು. ಆ ಕಡೆ ದಿಬ್ಬದ ಮೇಲಿಂದ ಬಿಎಂಟಿಸಿ ಬಸ್ಸು ಸ್ಪಿಡು ಸ್ಪಿಡು ಸ್ಪಿಡಾಗಿ ಬರ್ತಾ ಇದೆ. ಈ ಕಡೆ ರಸ್ತೆಯ ಆ ಬದಿಯಲ್ಲಿ ನಮ್ಮಪ್ಪ ಪುಣ್ಯಾತ್ಮ ಕೂಲಾಗಿ FB ನೋಡ್ತಾ ಬೈಕ್ನಲ್ಲಿ ಕೂತವ್ರೆ. "ಅಪ್ಪಯ್ಯ" ಅಂತ ಗಾಬರಿ, ಭಯ, ಆತಂಕದಲ್ಲಿ ಕೂಗಿದೆ. ನಮ್ಮಪ್ಪ ನನ್ ಕಡೆ ತಿರುಗುವ ಮುನ್ನವೇ ಬಸ್ಸು ತನ್ನ ಪಾಡಿಗೆ ಸ್ಪಿಡು ಸ್ಪಿಡು ಸ್ಪಿಡಾಗಿ ತಾನು ಹೊರಟೋಯ್ತು. ನಮ್ಮಪ್ಪ FB ಇಂದ ತಮ್ಮ ಕಣ್ಣುಗಳನ್ನು ತೆಗೆದು ನನ್ನತ್ತ ನೆಟ್ಟು "ಏನು? ದುಡ್ ಬೇಕಾ?" ಅಂದ್ರು. ನಾನು ರಸ್ತೆ ದಾಟಿ "ಅಯ್ಯೋ ಏನಪ್ಪಾ ನೀನು… ಸೈಡ್ ಗೆ ಹೋಗಿ ನಿಲ್ಲೋಕಾಗಲ್ವಾ…" ಅಂತ ರೇಗಿದೆ. ಅದಕ್ಕೆ ಅವರು "ಅದ್ಯಾಕೋ ಇನ್ನೂ ಅದೆಷ್ಟು ಸೈಡ್ಗೆ ನಿಲ್ಲೋದು ಇನ್ನು ಫುಟ್ಪಾತ್ ಮೇಲೆ ಗಾಡಿನೇ ಹತ್ತುಸ್ಬೇಕು ಅಷ್ಟೇ." ಅಂದ್ರು. "ಅಲ್ಲ ಆ ಕಡೆಯಿಂದ ಬಸ್ ಬರ್ತಾ ಇದ್ರೆ ನೀನಿಲ್ಲಿ FB ನೋಡ್ತಾ ಇದಿಯಲ್ಲ… ಆ ಕಡೆ ಆ ರೋಡ್ ಒಳಗೆ ನಿಲ್ಲೋದಲ್ವಾ…" ಅಂತ ಸ್ವಲ್ಪ ತಣ್ಣನೆಯ ಧ್ವನಿಯಲ್ಲಿ ಹೇಳಿದೆ. ನನಗೆ ಆ ಕಡೆಯಿಂದ ಆ ದೃಶ್ಯ ಹೇಗೆ ಕಂಡಿದೆ ಅಂತ ಅವರಿಗೆ ಗೊತ್ತಾಯ್ತು. ನನ್ನ 'ಪುತ್ರಕಾಳಜಿ' ಅವರಿಗೆ ಅರ್ಥವಾಗಿತ್ತು. ಜೋರಾಗಿ ನಕ್ಕಿ "ಅಯ್ಯೋ ಅದು ಹಂಗೆ ಕಾಣಿಸುತ್ತೆ ಕಣೋ ಅಷ್ಟೇ, ಗಾಬರಿಯಾಗ್ಬೇಡ ಆರಾಮಾಗಿರು" ಅಂತ ಹೇಳಿ ಸಮಾಧಾನ ಪಡಿಸಿದರು.
ಆಗ ಆ ಕ್ಷಣ ನನಗೆ ಜ್ಞಾನೋದಯವಾದಂತಾಯ್ತು. ಅಪ್ಪ-ಅಮ್ಮ ದೊಡ್ಡವರು ನಾವುಗಳು ಹೊರಗೆ ಹೋಗುವಾಗ ನೂರಾರು ಬಾರಿ 'ಹುಷಾರು' 'ಹುಷಾರು' ಎಂದೇಕೆ ಹೇಳುತ್ತಾರೆ ಎಂದು ಅರಿವಾಯಿತು. ನಮ್ಮ ಹುಚ್ಚಾಟಗಳು ನಮಗೆ ಕಾಣದೆ ಇರಬಹುದು, ಆದರೆ ನಾವು ಆಡೋ ಎಲ್ಲ ಮಕ್ಕಳಾಟವು ಹುಚ್ಚು ಹುಚ್ಚು ಆತುರದ ನಡೆಗಳು ಎಲ್ಲವೂ ಅವರಿಗೆ ಸ್ಪಷ್ಟವಾಗಿ ಕಾಣುತ್ತಿರುತ್ತದೆ. ಅದರ ಅಪಾಯಗಳು ಅವರಿಗೆ ತಿಳಿದಿರುತ್ತದೆ. ಹಾಗಾಗಿ ಅಷ್ಟೊಂದು ಬಾರಿ ಬುದ್ಧಿ ಹೇಳುತ್ತಾರೆ. ಅದೇ ಕಾರಣಕ್ಕೆ ಅವರು ಬೆಟ್ಟದಷ್ಟು ಕಾಳಜಿ ತೋರುತ್ತಾರೆ ತೋರುತ್ತಲೇ ಇರುತ್ತಾರೆ.
ನಾನು ಕಾಲೇಜಿಗೆ ಬಸ್ಸಿನಲ್ಲಿ ಓಡಾಡಲು ಶುರು ಮಾಡಿದ ಪ್ರಾರಂಭದ ದಿನಗಳಲ್ಲಿ ನಮ್ಮಪ್ಪ ಹೇಳಿದ ಒಂದು ಕಾಳಜಿಯ ಮಾತು ಈಗಲೂ ಕಿವಿಯಲ್ಲಿದೆ. "ಬಸ್ ಹತ್ತಿ ಇಳಿಯುವಾಗ, ಟ್ರಾಫಿಕ್ ನಲ್ಲಿದ್ದಾಗ ಅದು ಪಿಎಂ ಮೋದಿದೆ ಕಾಲ್ ಆಗಿರಲಿ ಸಿಎಂ ಸಿದ್ದುದೇ ಕಾಲ್ ಆಗಿರಲಿ ಅಟೆಂಡ್ ಮಾಡಬೇಡ. Always safety first" ಅಂದಿದ್ರು. ಈ ಮಾತನ್ನ ಬಹಳ ಸೀರಿಯಸ್ಸಾಗಿ ತಗೊಂಡಂತ ನಾನು ಇಂದಿಗೂ ಅದನ್ನು ಪಾಲಿಸಿಕೊಂಡು ಬಂದಿದ್ದೇನೆ. ಇತ್ತೀಚಿಗೆ ಬೆಂಗಳೂರಿಗೆ ಬಂದಾಗ ಮನೆಯಲ್ಲಿದ್ದ ಬೈಕ್ ನ ತಗೊಂಡು ಸಿಟಿ ರೌಂಡ್ಸಗೆ ಹೋಗಿದ್ದೆ. ಹೀಗೆ ಟ್ರಾಫಿಕ್ ನಲ್ಲಿದ್ದಾಗ ಒಂದೆರಡು ಮೂರು ಫೋನ್ ಕಾಲ್ ಬಂತು. ನಾನು ಅಪ್ಪ ಹೇಳಿದಂಗೆ ಪಿಎಂ ಮೋದಿ ಸಾಹೇಬ್ರುನಾದ್ರು ಆಗಿರಲಿ ಎಕ್ಸ್ ಸಿಎಂ ಸಿದ್ದುಜೀನಾದ್ರು ಆಗಿರಲಿ ಆಮೇಲೆ ರಿಟರ್ನ್ ಕಾಲ್ ಮಾಡಿದ್ರೆ ಆಯ್ತು ಬಿಡು ಅಂತ ಸಿಟಿ ರೌಂಡ್ಸ್ ಮುಂದುವರೆಸಿದೆ. ರೌಂಡ್ಸ್ ಮುಗಿಸಿಕೊಂಡು ಮನೆ ಸೇರುದ್ರೆ ನಮ್ಮಪ್ಪ "LKB ಫೋನ್ ಎತ್ತಕ್ಕೆ ಏನಾಗಿತ್ತೊ ನಿನಗೆ" ಅಂದ್ರು. ಪರಿಸ್ಥಿತಿ ಅರ್ಥ ಆಯ್ತು. ಎರಡು ಮೂರು ಸರಿ ಕಾಲ್ ರಿಸೀವ್ ಮಾಡಿರಲಿಲ್ಲವಲ್ಲ ಅದಕ್ಕೆ ಅಮ್ಮಂಗೆ ನನ್ನ ಚಿಂತೆಯಾಗಿತ್ತು ಅಪ್ಪಂಗೆ ಗಾಡಿ ಚಿಂತೆಯಾಗಿತ್ತು. "ಟ್ರಾಫಿಕ್ ನಲ್ಲಿದ್ದೆ ಪಿತಾಜಿ" ಅಂದೆ. ಮುಂದೆ ನಡೆದ ನಮ್ಮ ಸಂಭಾಷಣೆ ಅಷ್ಟೇನೂ ಮುಖ್ಯವಲ್ಲ ಬಿಡಿ. (ಸ್ವಲ್ಪ beep beep ಗಳಿದ್ದವು. ಅಷ್ಟೇ ಹೆಚ್ಚೇನು ಇರಲಿಲ್ಲ.) ನಾನು ನಮ್ಮ ಪಿತಾಶ್ರೀಯವರು LKB ಅಂದುಬಿಟ್ರಲ್ಲ ಅಂತ ಎಲ್. ಕೆ. ಅಡ್ವಾಣಿಯವರ ಥರ ಗಝಲ್ ಕೇಳಿಕೊಂಡು ಒಂದು ಮೂಲೆಯಲ್ಲಿ ಮುದುಡಿಕೊಂಡೆ. ಆಮೇಲೆ ಅನ್ಸುತ್ತು ಅವರು 'LKB' ಅಂದಿದ್ದು ನನ್ನ ಮೇಲಿರುವ (ಮುಖ್ಯವಾಗಿ ಗಾಡಿ ಮೇಲಿರುವ) ಅಗಾಧವಾದ ಕಾಳಜಿಯಿಂದಾಗಿ ಅಂತ.
ನಿಮ್ಮವ
Comments
Post a Comment