ವಿಶ್ವ ಮಾನಸಿಕ ಆರೋಗ್ಯ ದಿನ
ನಮಸ್ಕಾರ,
ಇವತ್ತು ವಿಶ್ವ ಮಾನಸಿಕ ಆರೋಗ್ಯ ದಿನ. ಈ ದಿನ ನನಗೆ ಬುದ್ಧನ ಒಂದು ಪ್ರಸಂಗ ನೆನಪಾಗ್ತಾ ಇದೆ. ಇದು ಬಹಳ ವರ್ಷದ ಹಿಂದೆ ಎಲ್ಲೋ ಪ್ರವಚನದಲ್ಲಿ ಕೇಳಿದ ಕಥೆ. ಇದು ಎಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲ, ಆದರೆ ಜೀವನಕ್ಕೆ ಬೇಕಾದಂತ ಪಾಠಗಳಿವೆ. ಆ ಪ್ರಸಂಗ ಹೀಗಿದೆ....
ಬುದ್ಧದೇವ ಜ್ಞಾನೋದಯಕ್ಕೋಸ್ಕರ ಬೋಧಿ ವೃಕ್ಷದ ಕೆಳಗೆ ಧ್ಯಾನಕ್ಕೆ ಕುಳಿತುಕೊಳ್ಳುತ್ತಾನೆ. ಧ್ಯಾನಕ್ಕೆ ಕೂತು ಹಗಲು ರಾತ್ರಿಗಳು ಉರುಳಿ ಅದೆಷ್ಟೋ ದಿನಗಳು ಕಳೆದು ಹೋಗುತ್ತವೆ. ಒಂದು ದಿನ ಬುದ್ಧ ದೇವನಿಗೆ ಜ್ಞಾನೋದಯವಾಗಿ ಕಣ್ಣು ತೆರೆಯುತ್ತಾನೆ. ಬುದ್ಧದೇವನ ಜ್ಞಾನೋದಯದ ವಾಣಿಯನ್ನು ಕೇಳಲು ಕಾಯುತ್ತಿದ್ದ ಬಿಕ್ಕು ಭಿಕ್ಷುಣೀ(ಬಿಕ್ಕುಣಿ)ಯರು ಬುದ್ಧದೇವ ಕಣ್ಣು ತೆರೆದ ತಕ್ಷಣ ಎಲ್ಲಾ ಬುದ್ಧದೇವನ ಪಾದದ ಬಳಿ ಸೇರುತ್ತಾರೆ. ಅಲ್ಲಿ ಸೇರಿದ್ದ ಎಲ್ಲರೂ ಬುದ್ಧದೇವ ಅದೇನೋ ತಾವುಗಳು "ಹಿಂದೆ ಎಂದೂ ಕೇಳಿರದ, ಮುಂದೆ ಇಡೀ ಮನುಕುಲವನ್ನೆ ಬೆಳಗಿಸುವ ಜ್ಞಾನೋದಯದ ವಾಣಿಯನ್ನು ಹೇಳುತ್ತಾನೆ" ಎಂದು ಕಾತುರದಿಂದ, ಉತ್ಸಾಹದಿಂದ, ಆಶ್ಚರ್ಯಕರವಾಗಿ ಬುದ್ಧನ ಮಾತುಗಳಿಗಾಗಿ ಕಾಯುತ್ತಿದ್ದರು. ಆದರೆ ಅನ್ನ ನೀರಿಲ್ಲದೆ ಧ್ಯಾನ ಮಾಡಿ ಸೊರಗಿ ಸೊರಗಿ ಅಸ್ತಿಪಂಜರದಂತಾಗಿದ್ದ ಬುದ್ಧದೇವ ಮೆಲ್ಲಗೆ ಬಾಯಿತೆರೆದು ಹೇಳಿದ್ದು ಒಂದೇ ಮಾತು "ಅಡುಗೆ ಬೇಯಿಸಿ" ಎಂದು. ಇದನ್ನು ಕೇಳಿ ಎಲ್ಲರಿಗೂ ಆಶ್ಚರ್ಯ ಜೊತೆಗೆ ನಿರಾಸೆಯು ಆಯಿತು. ಬುದ್ಧನ ಮಾತನ್ನು ಕೇಳಿ ಅವನ ಆಜ್ಞೆಯಂತೆ ಅಡುಗೆ ಮಾಡಲು ಶುರು ಮಾಡಿದರು. ನಂತರ ಎಲ್ಲರೂ ಒಟ್ಟಾಗಿ ಕೂತು ಊಟ ಮಾಡಿದರು. ಆ ದಿನ ಸಂಜೆ ತನ್ನ ಜ್ಞಾನೋದಯದ ಪ್ರವಚನ ನೀಡಲು ಕೂತನು ಬುದ್ಧ ದೇವ. ಆಗ ಹೇಳಿದ "ಈ ದೇಹ ನಮ್ಮನ್ನು ಹೊತ್ತು ಸಾಗುವ ವಾಹನವಿದ್ದಂತೆ. ಈ ದೇಹವನ್ನು ಚೆನ್ನಾಗಿ ನೋಡಿಕೊಳ್ಳಬೇಕು" ಎಂದು.
ಬುದ್ಧನ ಮಾತು ಎಷ್ಟು ಸತ್ಯ ಎಷ್ಟು ಸುಂದರ ಎಷ್ಟು ಪ್ರಜ್ವಲ. ಈ ದೇಹ ಆತ್ಮದ ಮನೆ ಹಾಗೂ ಹೊತ್ತು ತಿರುಗುವ ಗಾಡಿಯೂ ಹೌದು. (ಬುದ್ಧ "ಆತ್ಮದ" ವಿಚಾರವನ್ನು ಒಪ್ಪದಿದ್ದರೂ "ಆತ್ಮ"ದ ಅಸ್ತಿತ್ವವನ್ನು ಬಲವಾಗಿ ಎತ್ತಿ ಹಿಡಿಯುವ ವೈದಿಕ ಧರ್ಮದಲ್ಲಿ, ಸನಾತನ ಆಚರಣೆಯಲ್ಲಿಯೂ ದೇಹದ ಪ್ರಾಮುಖ್ಯತೆಯನ್ನು ಹೇಳಲಾಗಿದೆ.)
ಹಾಗಾಗಿ ಈ ದೇಹವನ್ನು ಸ್ವಚ್ಛವಾಗಿ, ಸುಂದರವಾಗಿ (ಸುಂದರತೆ/ಸೌಂದರ್ಯ is always a perspective matter. "Beauty lies in the eyes of the beholder") ಆರೋಗ್ಯವಾಗಿ ನೋಡಿಕೊಳ್ಳುವುದು ನಮ್ಮ ಆದ್ಯತೆ ಆಗಿರಬೇಕು. ಅಂತಯೇ ಈ ದೇಹ ಎಷ್ಟು ಮುಖ್ಯವೋ ಮನಸ್ಸು ಅಷ್ಟೇ ಮುಖ್ಯ. ಮನಸ್ಸಿನ ಆರೋಗ್ಯವು ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ಹಾಗಾಗಿ ಈ ದಿನ, ಈ ವಿಶೇಷವಾದ "ವಿಶ್ವ ಮಾನಸಿಕ ಆರೋಗ್ಯ ದಿನ"ದಂದು ನಾವೆಲ್ಲರೂ ನಮ್ಮ ಹಾಗೂ ನಮ್ಮವರ, ನಮ್ಮ ಸುತ್ತಮುತ್ತಲಿನ ಜನರ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ ಸೂಕ್ತ ರೀತಿಯಲ್ಲಿ ವರ್ತಿಸಿ ಸ್ವಾಸ್ಥ್ಯವನ್ನು ವೃದ್ಧಿಸಿಕೊಂಡು ಸೌಖ್ಯವಾಗಿರೋಣ.
ನಮಸ್ಕಾರ
ಎಂದೆಂದಿಗೂ ನಿಮ್ಮವ,
ಮಹೇಶ್ ಬಿ ಜೋಗಿ
A good inspiration to maintain physical health as well as mental health.
ReplyDeleteAll the best to writing
Thank you Thank you 😌🙏
Delete