ಏನನ್ನು ಸ್ವೀಕರಿಸಲಿಲ್ಲ

ನಮಸ್ಕಾರ,

ಇವತ್ತು ಒಂದು ಕಥೆ ಹೇಳ್ತೀನಿ ಅಂತ ಹೇಳಿದ್ದೆ. ಆ ಕಥೆ ಹೀಗಿದೆ…

ಒಮ್ಮೆ ಬುದ್ಧ ಮತ್ತು ತನ್ನ ಶಿಷ್ಯರು ನಡೆದುಕೊಂಡು ಹೋಗ್ತಾ ಇದ್ದರು. ಮಾರ್ಗ ಮಧ್ಯದಲ್ಲಿ ಯಾರೋ ಒಬ್ಬ ಬಹಳ ಕೋಪಿತನಾಗಿ ಬಂದು ಬುದ್ದನಿಗೆ ವಿನಾಕಾರಣ ಬೈಯಲು ಶುರು ಮಾಡಿದ. ಬುದ್ಧ ಅದಕ್ಕೆ ಹೆಚ್ಚೇನು ಗಮನಕೊಡದವನಂತೆ ಮುಂದೆ ನಡೆದು ಸಾಗುತ್ತಿದ್ದ. ಆ ವ್ಯಕ್ತಿ ಒಂದು ಹೆಜ್ಜೆ ಮುಂದೆ ಹೋಗಿ ಬುದ್ಧನಿಗೆ ಅಡ್ಡ ನಿಂತು ಬೈಯಲಾರಂಭಿಸಿದ. ಕೂಗಾಡಲು ಶುರು ಮಾಡಿದ. ಆಗ ಬುದ್ಧ ಮೌನವಾಗಿ ಶಾಂತತೆಯಿಂದ ಅಲ್ಲೇ ನಿಂತ. ಶಿಷ್ಯರು ನೋಡುತ್ತಲೇ ಇದ್ದರು. ಬುದ್ಧನ ಆದೇಶವಿಲ್ಲದೆ ಏನು ಮಾಡುವಂತಿರಲಿಲ್ಲ. ಕೆಲ ಶಿಷ್ಯರಿಗಂತು ಪ್ರೀತಿಯ ಬುದ್ಧನಿಗೆ ಬೈಯುತ್ತಿದ್ದಾನೆಂದು ವಿಪರೀತ ಕೋಪವೂ ಬಂತು, ಆದರೆ ಏನು ಮಾಡುವಂತಿರಲಿಲ್ಲ. ಆ ವ್ಯಕ್ತಿ ಒಂದು ಐದಾರು ನಿಮಿಷ ಕಿರುಚಾಡಿ ಕೂಗಾಡಿ ಅಸಭ್ಯವಾಗಿ ಬುದ್ಧನೆದುರು ವರ್ತಿಸಿ ಸುಸ್ತಾದ. ಸುಸ್ತಾದ ವ್ಯಕ್ತಿ ಕಿರುಚಾಡುವುದನ್ನು ನಿಲ್ಲಿಸಿ ಅದೇನನ್ನು ಗೊಣಗುತ್ತಾ ಮೆಲ್ಲನೆ ಅಲ್ಲೇ ಇದ್ದ ಮರದ ಕೆಳಗೆ ಹೋಗಿ ಕೂತನು. ಬುದ್ಧದೇವ ತನ್ನ ಎಂದಿನ ತೇಜಸ್ಸಿನಿಂದ ಮುಂದೆ ಸಾಗಿದ. ಶಿಷ್ಯರು ಬುದ್ಧ ದೇವನ ಹಿಂದೆ ಹಿಂದೆ ಹೆಜ್ಜೆ ಹಾಕುತ್ತಾ ನಡೆದರು. ನಂತರ ಆ ದಿನ ಸಂಜೆ ಪ್ರವಚನದಲ್ಲಿ ಶಿಷ್ಯರು ತಾಳ್ಮೆ ಕೆಡಿಸಿಕೊಂಡು ಕೇಳಿಯೇ ಬಿಟ್ಟರು "ಬುದ್ಧದೇವ, ನೀನೇಕೆ ಅವನನ್ನು ಏನು ಅನ್ನಲಿಲ್ಲ. ನೀನು ಒಂದು ಮಾತು ಹೇಳಿದ್ದರೆ ಸಾಕಿತ್ತು, ಅವನಿಗೊಂದು ಒಳ್ಳೆ ಪಾಠ ಕಲಿಸುತ್ತಿದ್ದೆವು…ಹೇಗೆಲ್ಲ ಬೈಯುತ್ತಿದ್ದನು… ಆದರೂ ಅದ್ಹೇಗೆ ನೀನು ಕೋಪಗೊಳ್ಳಲಿಲ್ಲ…ಅದ್ಹೇಗೆ ನೀನು ಬೇಸರಗೊಳ್ಳಲಿಲ್ಲ… ಅದ್ಹೇಗೆ ನೀನು ಎಂದಿನಂತೆ ಒಂದಿಷ್ಟು ಸಹ ಚಂಚಲಗೊಳ್ಳದೆ ಶಾಂತವಾಗಿಯೇ ಇದ್ದೆ…" ಆಗ ಬುದ್ಧದೇವ ಮುಗುಳ್ನಗುತ್ತಾ ಉತ್ತರಿಸಿದ "ನನ್ನ ಮಕ್ಕಳೇ, ನಾನು ಅವನಿಂದ ಏನನ್ನು ಸ್ವೀಕರಿಸಲಿಲ್ಲ"

ನಮಸ್ಕಾರ 

ಎಂದೆಂದಿಗೂ ನಿಮ್ಮವ, 
ಮಹೇಶ್ ಬಿ ಜೋಗಿ

Comments

  1. ಕಥೆ ಚೆನ್ನಾಗಿದೆ ವಿಚಾರ ಪ್ರಚೋದಕವಾಗಿ ಇದೆ

    ReplyDelete
  2. ಹೌದು, ನಿಜ.
    ಧನ್ಯವಾದಗಳು 🙏

    ReplyDelete

Post a Comment