ಊರಿನ ಕಥೆ

ನಮಸ್ಕಾರ,

ನೆನಪುಗಳು ಒಂಥರಾ ಸಿಹಿ ತಿಂಡಿ ಇದ್ದ ಹಾಗೆ. ಒಂದು ತಿಂದ ನಂತರ ಇನ್ನೊಂದು ಬೇಕೆನಿಸುತ್ತದೆ. ಇನ್ನೊಂದು ಆದ ಮೇಲೆ ಮತ್ತೊಂದು, ಮತ್ತೊಂದಾದ ಮೇಲೆ ಮಗದೊಂದು. ಹೀಗೆ ಒಂದರ ಹಿಂದೆ ಮತ್ತೊಂದರಂತೆ ತಿನ್ನುತ್ತಲೆ ಹೋಗುತ್ತೇವೆ. ಕೈಯಲ್ಲಿದ್ದ ಸಿಹಿ ತಿಂಡಿ ಖಾಲಿ ಆಗುತ್ತೆ… ಆದರೆ ಆಸೆ ಮಾತ್ರ ಕೆಲವೊಮ್ಮೆ ಹಾಗೆ ಬಾಕಿ ಉಳಿದುಕೊಂಡು ಬಿಡುತ್ತದೆ. ನೆನಪುಗಳು ಅಷ್ಟೇ. ಒಂದು ನೆನಪಿನ ಹಿಂದೆ ಮತ್ತೊಂದು ನೆನಪು ಮತ್ತೊಂದು ನೆನಪಿನ ಹಿಂದೆ ಇನ್ಯಾವುದೋ ನೆನಪು. ಹೀಗೆ ರೈಲು ಇಂಜಿನ್ ಹಿಂದೆ ಹಲವಾರು ಭೋಗಿಗಳು ಇದ್ದಹಾಗೆ ಯಾವುದೋ ಒಂದು ನೆನಪು ಅಚಾನಕ್ಕಾಗಿ ನಮ್ಮ ತಲೆಯಲ್ಲಿ ಮೂಡಿ ಅದರ ಹಿಂದೆ ಬೇರೆ ಬೇರೆ ನೆನಪುಗಳನ್ನು ಹೊತ್ತು ತರುತ್ತದೆ. ನೆನಪುಗಳು ಖಾಲಿ ಆಗ್ತವೆ. ಕೆಲವೊಮ್ಮೆ ತಲೆಯಲ್ಲಿ ಅದೆಷ್ಟೋ ನೆನಪುಗಳು ಇದ್ದರೂ ಸಹ ಮನಸ್ಸಿನ ಪರದೆಯ ಮೇಲೆ ನೆನಪಿನ ಪ್ರದರ್ಶನ ನಿಲ್ಲಿಸಿ ಈ ದಿನದ ಈ ಕ್ಷಣದ ಜೀವನದ ಜೊತೆ ಹೆಜ್ಜೆ ಹಾಕಬೇಕಾಗುತ್ತದೆ… ಓಡಬೇಕಾಗುತ್ತದೆ. ಮೂರು ದಿನದ ಹಿಂದೆ ಕಥೆಯೊಂದು ನೆನಪಾಯಿತು. ಆ ಕಥೆಯ ಹಿಂದೆ ಮತ್ತೆರಡು ಕಥೆ ನೆನಪಾದವು. ಈಗ ಆ ಎರಡು ಕಥೆಗಳ ಹಿಂದೆ ಮತ್ತೆ ನಾಲ್ಕು ಕಥೆ ನೆನಪಾಗಿವೆ. ದೇವರ ಕಥೆ, ಕಳ್ಳರ ಕಥೆ, ಊರಿನ ಕಥೆ ಮತ್ತೆ ಒಂದು ವಿಶೇಷವಾದ ಕಥೆ. ಈ ದಿನ ಊರಿನ ಕಥೆಯನ್ನು ಹೇಳುತ್ತೇನೆ…

ಇದೊಂದು ಜೆನ್(Zen) ಕಥೆ. ಜೆನ್ ಕಥೆಗಳು ಬಹಳ ಪುಟ್ಟ ಕಥೆಗಳು ಹಾಗೂ ಕಥೆಗೆ ಇಂಥದ್ದೇ conclusion ಅಂತ ಇರುವುದಿಲ್ಲ. ಕಥೆ ಅಂತ್ಯದಲ್ಲಿ ಸಿಗುವಂತ ಸಾರಾಂಶ ಅಥವಾ ನೀತಿ ಪಾಠ ಅಥವಾ conclusion ಅಂತ ಏನ್ ಅಂತಿವಿ ಅದು ಓದುಗರ ಬುದ್ಧಿಗೆ ಬಿಟ್ಟದ್ದು ಓದುಗರ ಮನಸ್ಸಿಗೆ ಬಿಟ್ಟದ್ದು ಓದುಗರ ಮನಸ್ಥಿತಿಗೆ ಬಿಟ್ಟದ್ದು ಓದುಗರ ಓದುವ ಸಂದರ್ಭಕ್ಕೆ ಬಿಟ್ಟದ್ದು. In simple ಅದು open end ಕಥೆಗಳು. ಆ ಕಥೆ ಹೀಗಿದೆ…

ತರುಣನೊಬ್ಬನಿಗೆ ಕಾರ್ಯನಿಮಿತ್ತವಾಗಿ ಹೊಸ ಊರಿಗೆ ಹೋಗಬೇಕಾಯಿತು. ಆ ಊರಿಗೆ ಹೋಗುವ ಮೊದಲು ತನ್ನ ಸ್ನೇಹಿತರಿಂದ, ಪರಿಚಯಸ್ತರಿಂದ ಆ ಊರಿನ ಬಗ್ಗೆ ವಿಚಾರಿಸಿಕೊಂಡಿದ್ದ. ಆ ಊರಿಗೆ ತಲುಪಿದ ನಂತರ ಅಲ್ಲಿ ಕೂತಿದ್ದ ಒಬ್ಬ ಬೌದ್ಧ ಬಿಕ್ಕುವನ್ನು ತರುಣ ಕೇಳಿದ "ಸ್ವಾಮಿ, ಈ ಊರಿಗೆ ಹೊಸಬ ನಾನು. ಹೇಗೆ ಈ ಊರು…" ಅದಕ್ಕೆ ಆ ಬೌದ್ಧ ಬಿಕ್ಕು "ನಿನಗೇನು ಅನ್ನಿಸುತ್ತದೆ" ಎಂದು ಮರು ಪ್ರಶ್ನೆ ಕೇಳಿದ. "ಈ ಊರಲ್ಲಿ ಮೋಸ ಜಾಸ್ತಿಯಂತೆ. ನನಗೇನೊ ಈ ಊರು ಅಷ್ಟಕ್ಕೆ ಅಷ್ಟೇ ಅನ್ಸುತ್ತೆ." ಉತ್ತರಿಸಿದ ತರುಣ. "ಹೌದು. ಈ ಊರು ಅಷ್ಟಕ್ಕೆ ಅಷ್ಟೇ." ಎಂದನಂತೆ ಬಿಕ್ಕು.

ನಮಸ್ಕಾರ 
ಎಂದೆಂದಿಗೂ ನಿಮ್ಮವ,
ಮಹೇಶ್ ಬಿ ಜೋಗಿ


Comments