ಕಳ್ಳರ ಕಥೆ
ನಮಸ್ಕಾರ,
ಅದೊಂದು ಊರು. ಆ ಊರಿಗೆ ಒಬ್ಬ ಹೊಸಬನ ಆಗಮನ. ವಾರ ಹತ್ತು ದಿನಗಳ ಕೆಲಸದ ಮೇರೆಗೆ ಬಂದಿದ್ದ ಹೊಸಬ ಊಟಕ್ಕಾಗಿ ಹೋಟೆಲನ್ನು ಹುಡುಕಿ ಬೆಳಗ್ಗೆ ತಿಂಡಿ ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಅಲ್ಲೇ ಮಾಡಲಾರಂಭಿಸಿದ. ಅಲ್ಲಿ ಆ ಹೋಟೆಲ್ನಲ್ಲಿ ಇಬ್ಬರು ಅಡುಗೆ ಮಾಡುತ್ತಿದ್ದರೆ ಇನ್ನಿಬ್ಬರು ಟೇಬಲ್ ಸರ್ವಿಸ್ ಮಾಡುತ್ತಿದ್ದರು ಹಾಗೂ ಒಬ್ಬ ಗಲ್ಲ ಪೆಟ್ಟಿಗೆ ನೋಡಿಕೊಳ್ಳುತ್ತಿದ್ದ. ಹೋಟೆಲ್ ನಡೆಸುತ್ತಿದ್ದ ಆ ಐದು ಮಂದಿ ಬರುತ್ತಿದ್ದ ಗ್ರಾಹಕರನ್ನು ಲಘು ಬಗೆಯಿಂದ ಬರಮಾಡಿಕೊಂಡು ನಗುಮುಖದಿಂದಲೇ ಮಾತನಾಡಿಸಿ ಬಹಳ ನಾಜೂಕಾಗಿ ವ್ಯವಹರಿಸುತ್ತಿದ್ದರು. ಹೀಗೆ ಏಳೆಂಟು ದಿನಗಳು ಕಳೆಯಿತು. ಆ ಹೊಸಬನ ಬಂದ ಕೆಲಸ ಮುಗಿದಿತ್ತು. ಮತ್ತೆ ತನ್ನೂರಿಗೆ ಹಿಂದಿರುಗುವ ಸಮಯ ಬಂದಿತ್ತು. ಆ ರಾತ್ರಿ ಸುಮಾರು ಹತ್ತು ವರೆಗೆ ತನ್ನೂರಿಗೆ ಬಸ್ಸಂದಿತ್ತು. ಹೋಟೆಲ್ ನಿಂದ ಬಸ್ ಸ್ಟೇಷನಿಗೆ ಕೇವಲ ಒಂದೆರಡು ನಿಮಿಷಗಳ ಕಾಲ್ನಡಿಗೆ. ತನ್ನೆಲ್ಲಾ ಲಗೇಜ್ ಗಳನ್ನು ಪ್ಯಾಕ್ ಮಾಡಿಕೊಂಡು ಸೀದಾ ಹೋಟೆಲ್ ಗೆ ಬಂದ. ಆಗ ಸಮಯ ಸುಮಾರು ರಾತ್ರಿ ಹತ್ತಾಗಿತ್ತು. ಹಾಯಾಗಿ ನಿಧಾನವಾಗಿ ಊಟ ಮಾಡಿದ. ತನ್ನೆಲ್ಲಾ ಲಗೇಜ್ ಗಳನ್ನು ಕೈಯಲ್ಲಿ ಎತ್ತಿಕೊಂಡು ಊಟದ ದುಡ್ಡು ಕೊಡಲು ಗಲ್ಲ ಪೆಟ್ಟಿಗೆಯ ಕಡೆಗೆ ಹೆಜ್ಜೆ ಹಾಕಿದನು. ಗಲ್ಲ ಪೆಟ್ಟಿಗೆಯಲ್ಲಿ ಕೂತಿದ್ದವನು ಯಾರೋ ಗ್ರಾಹಕನ ಜೊತೆಯಲ್ಲಿ ಮಾತನಾಡುತ್ತಿದ್ದ. ಇದನ್ನ ನೋಡಿದ ಹೊಸಬನಿಗೆ ಅದು ಯಾಕೋ ಏನೋ ದುಡ್ಡು ಕೊಡದೆ ಹಾಗೆ ಹೋಗುವ ಮನಸಾಯಿತು. ಅಂತೆಯೇ ಮೆಲ್ಲಗೆ ಹೋಟೆಲ್ ನಿಂದ ಹೊರಗೆ ಬಂದು ಬಸ್ ಸ್ಟೇಷನ್ ಕಡೆಗೆ ಬೇಗ ಬೇಗ ಹೆಜ್ಜೆ ಹಾಕಿದನು. ಸ್ಟೇಷನ್ನಲ್ಲಿ ನಿಂತಿದ್ದ ಬಸ್ಸನ್ನು ಹತ್ತಿ ಕೂತು ನಿಟ್ಟಿಸಿರು ಬಿಟ್ಟನು. ಮರುದಿನ ಬೆಳಗ್ಗೆ ಊರು ತಲುಪಿದ. ಹೀಗೆ ಒಂದೆರಡು ದಿನ ಕಳೆದಿರಬಹುದು, ಅವನಲ್ಲಿ "ಅವತ್ತೇಕೆ ನಾನು ದುಡ್ಡು ಕೊಡದೆ ಹಾಗೆ ಬಂದೆ" ಎನ್ನುವ ಪ್ರಶ್ನೆ ಪದೇಪದೇ ಕಾಡಲಾರಂಭಿಸಿತು. ತನ್ನ ಜೀವಮಾನದಲ್ಲೇ ಹಿಂದೆ ಎಂದಿಗೂ ಇಂತಹ ಕೆಲಸ ಮಾಡದವನು ಆ ರಾತ್ರಿ ಹಾಗೆ ಮಾಡಲು ಯಾಕೆ ಮನಸ್ಸಾಯಿತು ಎಂದು ತನ್ನನ್ನು ತಾನೇ ಪ್ರಶ್ನೆಸಿಕೊಳ್ಳುತ್ತಿದ್ದ. ಕೊನೆಗೆ ಮನಸ್ಸು ತಡೆಯದೆ ಅದರ ಕಾರಣ ತಿಳಿಯಲು ಆ ಊರಿನ ಬಸ್ ಹತ್ತಿದ. ಅಲ್ಲಿ ಹೋಗಿ ಕೆದಕಿ ವಿಚಾರಿಸಿದ ನಂತರ ಅವನಿಗೆ ತಿಳಿದಿದ್ದು ಅದೊಂದು ಕಳ್ಳರು ನಡೆಸುತ್ತಿದ್ದ ಹೋಟೆಲ್ ಎಂದು. ಆ ಐದು ಜನ ಕಳ್ಳತನ ಮಾಡುವ ಕಳ್ಳರು. ಕಳ್ಳರು ಮಾಡಿ ಕಳ್ಳರೇ ಬಿಡಿಸುತ್ತಿದ್ದ ಅಡುಗೆಯನ್ನು ತಿಂದು ತಿಂದು ಆ ಹೊಸಬನಿಗೋ ಕಳ್ಳರ ಮನಸ್ಥಿತಿಯೇ ಬಂದಿತ್ತು. ಆ ಹೊಸಬ ಅವತ್ತು ರಾತ್ರಿ ಕೊಡಬೇಕಾಗಿದ್ದ ಊಟದ ದುಡ್ಡನ್ನು ಮೆತ್ತಗೆ ಗಲ್ಲ ಪೆಟ್ಟಿಗೆಯ ಮೇಲಿಟ್ಟು ಮತ್ತೆ ತನ್ನೂರನ್ನು ಸೇರಿದ.
ಅದಕ್ಕೆ ಅಲ್ವೇ ಎಷ್ಟೇ ಆದರೂ ಮನೆ ಊಟ ಮನೆ ಊಟವೇ ಹೊರಗಿನ ಊಟ ಎಷ್ಟೇ ರುಚಿ ಶುಚಿಯಾಗಿದ್ದರು ಹೊರಗಿನ ಊಟ ಅನ್ನೋದು. ಮನೆಯಲ್ಲಿ ಅಮ್ಮನೊ ಹೆಂಡತಿಯೊ ಅಕ್ಕನೋ ತಂಗಿಯೊ ಮಗಳೊ ಮಾಡೋ ಅಡುಗೆಯಲ್ಲಿ ಹೊರಗೆಲ್ಲೂ ಸಿಗದಂತಹ "ನಮ್ಮವರು ಎನ್ನುವ ಪ್ರೀತಿ-ಕಾಳಜಿ" ಅನ್ನೊ ಪದಾರ್ಥ ಎತೇಚ್ಛವಾಗಿ ಸೇರಿಸಲಾಗಿರುತ್ತದೆ. ದೇವಸ್ಥಾನಗಳಲ್ಲಿ ಕೊಡುವಂತಹ ಪ್ರಸಾದದಲ್ಲಿ ಆ ದೈವಿಕತೆ ಸೇರಿರುತ್ತದೆ. ಹಾಗಾಗಿ ನಾವು ಸೇವಿಸುವ ಆಹಾರವನ್ನು ಸಾತ್ವಿಕ ಮನಸ್ಥಿತಿಯಿಂದ ತಯಾರಿಸಿ, ಶಾಂತ ಸ್ವಭಾವದಲ್ಲಿ ಬಡಿಸಿಕೊಂಡು ನೆಮ್ಮದಿಯಿಂದ ದೈವ ಸ್ಮರಣೆ ಮಾಡಿಕೊಂಡು ಸ್ವೀಕರಿಸಬೇಕು. ನಾವು ಸೇವಿಸುವ ಆಹಾರ ನಮ್ಮೊಳಗೆ ಸೇರಿ ನಮ್ಮೊಂದಿಗೆ ನಾವಾಗಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಅದಕ್ಕೆ ನೋಡಿ, ದೇವಸ್ಥಾನಗಳಲ್ಲಿ ಪ್ರಸಾದವಾಗಿ ಕೊಡುವ ಚಿತ್ರಾನ್ನದ ರುಚಿಗೂ ಮನೆಯಲ್ಲಿ ಮಾಡಿದ ಚಿತ್ರಾನ್ನದ ರುಚಿಗೂ ಎಷ್ಟು ಅಜಗಜಾಂತರ. ದೈವಸ್ಮರಣೆ ಮಾಡಿಕೊಂಡು ಅವನ ಹೆಸರೇಳಿ ಅವನಿಗಾಗಿ ಮಾಡಿದ ಪ್ರಸಾದವನ್ನು ಸ್ವೀಕರಿಸಿದ ಮೇಲೆ ಮನಸ್ಸಿಗೆ ಸಿಗುವ ಶಾಂತಿ ನೆಮ್ಮದಿ ಮತ್ತೆಲ್ಲೂ ಸಿಗದು.
ನಮಸ್ಕಾರ
ಎಂದೆಂದಿಗೂ ನಿಮ್ಮವ,
ಮಹೇಶ್ ಬಿ ಜೋಗಿ
ಲೋ ಮಹೇಶ ,ಹೋಟೆಲ್ ನಡೆಸುವವರು ಕಳ್ಳರು ಎಂದು ಹಾಕಿದ್ಯಲ್ಲ ಹೋಟೆಲ್ಮಾಲೀಕರು ಈ ಕಥೆ ಓದಿದ್ದರೆ ಅವರಿಗೆ ಏನು ಅನಿಸುವುದಿಲ್ಲ
ReplyDeleteಹೋಟೆಲ್ ಮಾಲೀಕರು ಪ್ರಬುದ್ಧ ಹಾಗೂ ವಿಶಾಲ ಮನೋಭಾವದವರು ಬಿಡಿ. ಅವರಿಗೆ ಏನು ಅನಿಸಬೇಕೊ ಅದು ಅನಿಸಿರುತ್ತೆ. ನಿಮ್ಗೆ ಏನು ಅನಿಸುತ್ತೆ?? ನನಗೆ ಎನ್ ಅನ್ಸುತ್ತೆ ಅಂದ್ರೆ ನೀವು ಇನ್ನೊಮ್ಮೆ ಕಥೆ ಓದಬೇಕು ಅಂತ.😅😂
ReplyDelete