ದೇವರ ಕಥೆ

ನಮಸ್ಕಾರ,

ಪ್ರಶಾಂತ ಸಂಜೆ ಅದು. ವಿಹಾರದಲ್ಲಿ ಬುದ್ಧದೇವ ಪ್ರವಚನ ನೀಡುತ್ತಿದ್ದ. ಪ್ರವಚನ ಮುಗಿದ ನಂತರ ಸೇರಿದ್ದ ಅನುಯಾಯಿಗಳು ತಮ್ಮಲ್ಲಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಅವಕಾಶವಿತ್ತು. ಪ್ರವಚನ ಮುಗಿದ ನಂತರ ಅಲ್ಲಿ ಸೇರಿದ್ದ ಇಬ್ಬರೂ ತಮ್ಮ ತಮ್ಮಲ್ಲೇ ಎನೊ ಜೋರು ಜೋರಾಗಿ ವಾದ ಮಾಡುತ್ತಾ ಒಬ್ಬ ಬುದ್ದನನ್ನು ಕೇಳಿದ "ಬುದ್ಧದೇವ, ದೇವರಿದ್ದಾನಲ್ಲವೇ… ನೀನೊಮ್ಮೆ ಈ ಮೂರ್ಖನಿಗೆ ಹೇಳು ದೇವರಿದ್ದಾನೆ ಎಂದು. ದೇವರ ಅಸ್ತಿತ್ವವಿದೆಯೆಂದು, ನಮ್ಮ ಮೇಲೆ ಎಲ್ಲವನ್ನು ಮೀರಿಸಿ ಎಲ್ಲವನ್ನು ನಿಯಂತ್ರಿಸುವ ಒಂದು ಶಕ್ತಿ ಇದೆ ಎಂದು." ಅವನ ಮಾತು ಮುಗಿಯುವ ಮುನ್ನವೇ ಮತ್ತೊಬ್ಬ ಧ್ವನಿ ಏರಿಸಿ ಬುದ್ಧದೇವನಗೆ ಹೇಳಿದ "ಬುದ್ಧದೇವ, ನೀನು ವೇದಗಳನ್ನು ತಿರಸ್ಕರಿಸಿದವನು. ನೀನು ಆತ್ಮದ ಅಸ್ತಿತ್ವವನ್ನು ತಿರಸ್ಕರಿಸಿದವನು. ಈ ಅವಿವೇಕಿಗಳಿಗೆ ನೀನೆ ಹೇಳು ಬುದ್ಧದೇವ ದೇವರಿಲ್ಲವೆಂದು." ಬುದ್ಧದೇವ ಎಂದಿನಂತೆಯೇ ತನ್ನ ತೇಜಸ್ಭರಿತವಾದ ಮುಖದಲ್ಲಿ ಒಂದು ಮುಗುಳ್ನಗೆಯನ್ನು ಅರಳಿಸಿ "ಸರಿ, ಹೇಳ್ತೀನಿ. ಆಮೇಲೆ ಕೊಠಡಿಗೆ ಒಬ್ಬೊಬ್ಬರೇ ಬನ್ನಿ." ಎಂದು ಹೇಳಿ ಬೇರೆ ಅನುಯಾಯಿಗಳ ಕಡೆ ತನ್ನ ದೃಷ್ಟಿ ಬೀರಿದ. ಬಂದಿದ್ದ ಜನರ ಗುಂಪು ಕರಗಿತು. ಬುದ್ಧದೇವ ಕೊಟ್ಟಡಿಯಲ್ಲಿ ಮಂದಹಾಸದಿಂದ ಕೂತಿದ್ದ. ಶಿಷ್ಯರು ಬುದ್ಧದೇವನ ಪಾದದ ಬಳಿ ಕೂತಿದ್ದರು. ಒಬ್ಬ ಬಂದು ಬುದ್ಧನ ಮುಂದೆ ಮಂಡಿ ಊರಿ ಕೇಳಿದ "ಬುದ್ಧದೇವ, ಹೇಳು… ದೇವರಿದ್ದಾನಲ್ಲವೇ… ಹೇಳು ಬುದ್ಧದೇವ ಹೇಳು…" ಬುದ್ಧದೇವನ ತುಟಿಗಳ ಮೇಲಿನ ಮಂದಹಾಸದ ನಗು ಮಾಯವಾಯಿತು. ಮುಖದಲ್ಲಿ ಗಾಂಭೀರ್ಯತೆ ಮೂಡಿತು. ಬುದ್ಧದೇವ ಅಚಲವಾಗಿ, ಗಾಂಭೀರ್ಯವಾಗಿ, ದೃಢವಾಗಿ ನುಡಿದ "ಇಲ್ಲ. ದೇವರಿಲ್ಲ" ಎಂದು. ಆ ವ್ಯಕ್ತಿ ಅಲ್ಲೇ ಬುದ್ಧದೇವನ ಪಾದಗಳ ಬಳಿ ಕುಸಿದು ಬಿದ್ದ. ಅವನಿಗೆ ಆಕಾಶವೇ ತನ್ನ ತಲೆ ಮೇಲೆ ಬಿದ್ದಂತಾಗಿತ್ತು. ಮೆಲ್ಲಗೆ ಅಳಲು ಶುರು ಮಾಡಿದ. ಗೋಳಾಡಲು ಆರಂಭಿಸಿದ. ಬುದ್ಧದೇವ ಒಂದಿಂಚು ಅಲಗಡಲಿಲ್ಲ. ಒಂದು ಸಮಾಧಾನದ ಮಾತು ಸಹ ಆಡಲಿಲ್ಲ. ಸ್ವಲ್ಪ ಸಮಯದ ನಂತರ ಆ ವ್ಯಕ್ತಿ ನಿರ್ಗಮನಿಸಿದ. ಆ ವ್ಯಕ್ತಿ ನಿರ್ಗಮಿಸುತ್ತಿದಂತೆ ಮತ್ತೊಬ್ಬ ಬುದ್ಧನ ಬಳಿ ಬಂದು ಕೇಳಿದ "ದೇವರಿಲ್ಲ ಅಲ್ಲವೇ… ಬುದ್ಧದೇವ, ದೇವರಿಲ್ಲ ಅಲ್ಲವೇ…" ಎಂದು. ಬುದ್ಧದೇವ ಪುಟ್ಟದೊಂದು ನಗೆ ಬೀರಿತ್ತಾ… ಶಾಂತವಾಗಿ… ತನ್ನ ಮೃದುವಾದ ಧ್ವನಿಯಲ್ಲಿ ಹೇಳಿದ "ದೇವರಿದ್ದಾನೆ. ಕಂಡಿತವಾಗಿಯು ಅವನಿದ್ದಾನೆ, ದೈವವಿದೆ." ಎಂದು. ಇದನ್ನು ಕೇಳಿದ ಆ ವ್ಯಕ್ತಿಗೆ ದಿಗ್ಭ್ರಮೆಯದಂತಾಯಿತು. ಆತನಿಗೆ ಪ್ರಪಾತಕ್ಕೆ ಕುಸಿದಂತಹ ಅನುಭವವಾಯಿತು. ಅಲ್ಲೇ ನಿಂತಲ್ಲೇ ಬೆವಿಯಲ್ಲಾರಂಭಿಸಿದ. ಬುದ್ಧನ ಬಳಿ ಕೂತಿದ್ದ ಶಿಷ್ಯರಿಗೂ ಆಶ್ಚರ್ಯ. ಒಂದಿಷ್ಟು ಸುಧಾರಿಸಿಕೊಂಡು ಆ ವ್ಯಕ್ತಿ ಹೊರಟುಹೋದ. ಆಶ್ಚರ್ಯ ಹಾಗೂ ಗೊಂದಲದಲ್ಲಿದ್ದ ಶಿಷ್ಯರು ಬುದ್ಧನನ್ನು ಕೇಳಿಯೇ ಬಿಟ್ಟರು "ಬುದ್ಧದೇವ, ಇದೇನಿದು… ಇಬ್ಬರಿಗೂ ಬೇರೆ ಬೇರೆ ಉತ್ತರ ಕೊಟ್ಟಿರಿ. ಏನಿದರ ಅರ್ಥ…ಏನಿದರ ಉದ್ದೇಶ" ಎಂದು. ಅದಕ್ಕೆ ಬುದ್ಧ ಹೀಗೆ ಹೇಳುತ್ತಾನೆ "ನನ್ನ ಶಿಷ್ಯರೇ, ಅವರಿಗೆ ಉತ್ತರ ಕೊಡುವುದಕ್ಕಿಂತ ಹೆಚ್ಚಾಗಿ ಅವರ ಅಹಂಗಳನ್ನು ಹೊಡೆಯುವುದು ಮುಖ್ಯವಾಗಿತ್ತು. ಒಬ್ಬ ದೇವರಿದ್ದಾನೆ ಎನ್ನುವ ಅಹಂನಲ್ಲಿದ್ದ. ಮತ್ತೊಬ್ಬ ದೇವರಿಲ್ಲ ಎನ್ನುವ ಅಹಂನಲ್ಲಿದ್ದ. ಅವೆರಡು ಅವರಿಗೆ ಅಪಾಯಕಾರಿಯೇ. ಹಾಗಾಗಿ ಅವೆರಡನ್ನು ಹೊಡೆದಿದ್ದೇನೆ."

(Chill. ತುಂಬಾ ತಲೆಕೆಡಿಸಿಕೊಳ್ಳಬೇಡಿ. ಕೆಲ ಕಥೆಗಳು, ಕೆಲ ಮಾತುಗಳು, ಕೆಲ ಸಿದ್ಧಾಂತಗಳು, ಕೆಲ ಆಚಾರ ವಿಚಾರಗಳು ನಮ್ಮ belief system ನಮ್ಮ ನಂಬಿಕೆಗಳನ್ನೇ ಕೆಲವೊಮ್ಮೆ ಅಲ್ಲಾಡಿಸಿ ಬಿಡುತ್ತವೆ. ನೀವು ಯಾವ ವಯಸ್ಸಿನವರೇ ಆಗಿರಿ, ಈ ಕ್ಷಣಕ್ಕೆ ನಾನು ಹೇಳುವುದಿಷ್ಟೇ… "ನಿಮ್ಮ ನಿಮ್ಮ ನಂಬಿಕೆಗಳ ಜೊತೆ ಚೆನ್ನಾಗಿ, ನೆಮ್ಮದಿಯಾಗಿ ಬದುಕಿ. ಬದುಕಲು ಬಿಡಿ." Enjoy.)

ನಮಸ್ಕಾರ 

ಎಂದೆಂದಿಗೂ ನಿಮ್ಮವ, 
ಮಹೇಶ್ ಬಿ ಜೋಗಿ

Comments

  1. Super Mahesh... Badukalu bidi good words

    ReplyDelete
    Replies
    1. Thank you Thank you😁 ಬದುಕಿ ಬದುಕಲು ಬಿಡಿ Peace😉

      Delete
  2. ಕಥೆ ಮತ್ತು ಕಥೆಯ ಸಂದೇಶ ನಿಜಕ್ಕೂ ಚೆನ್ನಾಗಿದೆ

    ReplyDelete

Post a Comment