ಒಂದು ಪ್ರಸಿದ್ಧ ಕಥೆ....

ಒಂದಾನೊಂದು ಕಾಲದಲ್ಲಿ ಒಂದು ದೊಡ್ಡ ರಾಜ್ಯವಿತ್ತು. ಆ ರಾಜ್ಯಕ್ಕೊಬ್ಬ ರಾಜ. ಆ ರಾಜನಿಗೊಬ್ಬಳು ಸುಂದರ ರಾಣಿ. ಆ ರಾಣಿಗೆ ಸಖಿಯರಿಬ್ಬರು. ಒಮ್ಮೆ ಪ್ರಶಾಂತ ಸಂಜೆಯ ಹೊತ್ತು ಸಖಿಯರೊಡನೆ ವಾಯುವಿಹಾರದಲ್ಲಿದ್ದ ರಾಣಿಯ ಎಡಗಣ್ಣಿಗೆ ಗಾಳಿಯಲ್ಲಿ ಎಲ್ಲಿಂದಲೋ ಹಾರಿ ಬಂದ ಅದೇನೋ ಕಸ ತಗಲುತ್ತದೆ. ತಕ್ಷಣ ಕಣ್ಣುಜ್ಜಿಕೊಂಡ ರಾಣಿ ಕಣ್ಣು ಮುಚ್ಚಿಕೊಂಡ "ಅಯ್ಯೋ…ಉರಿ…ಉರಿ…" ಎಂದು ಕೂಗಿಕೊಂಡಾಗ ಪಕ್ಕದಲ್ಲಿದ್ದ ಸಖಿಯರು ಕಣ್ಣಿಗೆ ತಗುಲಿರುವ ಕಸವನ್ನು ಊದುವ ಪ್ರಯತ್ನ ಮಾಡುತ್ತಾರೆ. ಪ್ರಯತ್ನ ಪಟ್ಟಷ್ಟು ರಾಣಿಯ ಕಣ್ಣುರಿ ಹೆಚ್ಚುತಲೆ ಹೋಗುತ್ತದೆ. ಕಣ್ಣುತವೂ ಕಾಣಿಸಿಕೊಳ್ಳುತ್ತದೆ. ನೋವಿನಲ್ಲೇ ರಾಣಿಯು ಹಾಗೂ ಭಯದಲ್ಲಿ ಸಖಿಯರು ಅರಮನೆಗೆ ಹಿಂದಿರುಗಿ ರಾಜವೈದ್ಯರಿಗೆ ಬರ ಹೇಳುತ್ತಾರೆ. ರಾಜವೈದ್ಯರು ಬಂದು ರಾಣಿಯ ಕಣ್ಣಿನ ತಪಾಸಣೆ ಮಾಡಿ ಅದೇನೋ ತಮ್ಮ ಚೀಲದಿಂದ ತೆಗೆದು ಹಾಲಿನ ಜೊತೆಗೆ ಸೇರಿಸಿ ಕಣ್ಣಿಗೆ ಲೇಪಿಸಿದರು. ರಾಣಿಯ ಕಣ್ಣುರಿ ಕ್ರಮೇಣ ಕಮ್ಮಿಯಾಗಿ ಕಣ್ಣಿನ ಊತವೂ ಕಮ್ಮಿ ಆಯಿತು. ರಾಜವೈದ್ಯರು ನೋವು ಕಮ್ಮಿಯಾಗಲು ಔಷಧಿಯನ್ನು ಕೊಟ್ಟು ವಿಶ್ರಾಂತಿ ಪಡೆಯಲು ಹೇಳಿ ಹೊರಡುತ್ತಾರೆ. ಮಾರನೇ ದಿನ ನಿದ್ದೆಯಿಂದ ಎದ್ದ ರಾಣಿಗೆ ಎಡಗಣ್ಣು ಮಂಜುಮಂಜಾಗಿ ಕಾಣುತ್ತಿತ್ತು. ಗಾಬರಿಗೊಂಡ ರಾಣಿ ರಾಜವೈದ್ಯರನ್ನು ಕರೆತರಲ ಆದೇಶಿಸಿದಳು. ವೈದ್ಯರು ಮತ್ತೆ ಕಣ್ಣಿನ ತಪಾಸಣೆ ಮಾಡಿ ತಮಗೆ ತೋಚಿದ ಔಷಧಿಯನ್ನು ಕೊಟ್ಟು ಒಂದೆರಡು ದಿನದಲ್ಲಿ ಗುಣವಾಗುವ ಭರವಸೆ ಕೊಟ್ಟು ಹೊರಟರು. ಆದರೆ ಅವುಗಳ ಪ್ರಯೋಜನವೇನು ಆಗಲಿಲ್ಲ. ಬದಲಿಗೆ ರಾಣಿಯ ಎಡಗಣ್ಣಿನ ದೃಷ್ಟಿ ಇನ್ನಷ್ಟು ಕ್ಷಿಣಿಸುತ್ತಲೇ ಹೋಯಿತು.‌ ನೋವು ದುಃಖದಲ್ಲಿದ್ದ ತನ್ನ ಪ್ರೀತಿಯ ರಾಣಿಯ ಸ್ಥಿತಿಯನ್ನು ಕಂಡು ಚಿಂತಿತನಾದ ರಾಜನು ಬೇರೆ ಬೇರೆ ವೈದ್ಯರನ್ನು ಕರೆಸಿದ, ನಾನಾ ಪಂಡಿತರ ಸಲಹೆ ಪಡೆದ. ಇದು ಯಾವುದು ಫಲಿಸದಿದ್ದಾಗ ವಿಷಯವನ್ನು ಊರಿಗೆಲ್ಲ ಡಂಗುರ ಸಾರಿಸಿ ಪರಿಹಾರ ಸೂಚಿಸಿದವರಿಗೆ ನೂರೆಕ್ಕರೆ ಫಲವತ್ತಾದ ಭೂಮಿ ಬಹುಮಾನ ಎಂದು ಘೋಷಿಸಿದ. ದಂಗುರ ಸಾರಿದ ಮೂರನೇ ದಿನಕ್ಕೆ ಒಬ್ಬ ಸಾಧು ಅರಮನೆಗೆ ಬಂದು ರಾಣಿಯ ಕಣ್ಣಿನ ತಪಾಸಣೆ ಮಾಡಿ ಅದೇನೋ ಒಂದು ವಿಶೇಷವಾದ ಸೊಪ್ಪಿನ ರಸದಿಂದ ಕಣ್ಣು ವಾಸಿಯಾಗುತ್ತದೆ ಎಂದೂ ಆ ಸೊಪ್ಪನ್ನು ತರುವುದಾಗಿ ಹೇಳಿ ಹೊರಡುತ್ತಾರೆ. ಮಾರನೇ ದಿನ ಬಂದ ಆ ಸಾಧು ರಾಣಿಯ ಕಣ್ಣಿಗೆ ಆ ಸೊಪ್ಪಿನ ರಸವನ್ನು ಲೇಪಿಸಿ ಕಣ್ಣುಗಳಿಗೆ ಬಟ್ಟೆಯ ಪಟ್ಟಿ ಕಟ್ಟಿ ಎರಡು ರಾತ್ರಿ ಎರಡು ಹಗಲು ವಿಶ್ರಾಂತಿ ಪಡೆಯಲು ಹೇಳುತ್ತಾರೆ. "ರಾಣಿಯ ಕಣ್ಣಿನ ಬಟ್ಟೆ ತೆಗೆದಾಗ ರಾಣಿಯವರು ಬರೇ ಹಸಿರು ಹಸಿರಾಗಿಯೇ ಕಾಣಬೇಕು.‌ ಆಗ ಮಾತ್ರವೇ ಕಣ್ಣುವಾಸಿಯಾಗುತ್ತದೆ." ಎಂದು ಹೇಳಿ ರಾಜನ ಬಹುಮಾನವನ್ನು ವಿನಯದಿಂದ ತಿರಸ್ಕರಿಸಿ "ರಾಜ ಹಾಗು ಮಹಾರಾಣಿ ಸುಖವಾಗಿದ್ದರೆ ಅಷ್ಟೇ ಸಾಕು" ಎಂದು ಆಶೀರ್ವದಿಸಿ ನಿರ್ಗಮಿಸುತ್ತಾರೆ. 

ಹೀಗೆ ಒಂದೆರಡು ತಿಂಗಳ ನಂತರ ಆ ಸಾಧು ರಾಣಿಯ ಆರೋಗ್ಯ ವಿಚಾರಿಸಲು ಅರಮನೆ ಒಳಗೆ ಪ್ರವೇಶಿಸುತ್ತಿದ್ದಂತೆ ಹಸಿರು ಬಟ್ಟೆ ತೊಟ್ಟಿದ್ದ ಸೈನಿಕರು ಓಡಿ ಬಂದು ವಿಷಯವೇನೆಂದು ವಿಚಾರಿಸುತ್ತಾರೆ. ಮಹಾರಾಣಿಯವರ ಆರೋಗ್ಯದ ವಿಷಯಕ್ಕೆ ಸಂಬಂಧಿಸಿದ್ದು ಎಂದು ತಿಳಿದ ಸೈನಿಕರು ಮಂತ್ರಿಗೆ ವಿಷಯ ಮುಟ್ಟಿಸುತ್ತಾರೆ. ಮಹಾಮಂತ್ರಿಯೂ ಸಾಧುವಿಗೆ ಹಸಿರು ಬಟ್ಟೆ ತೋಡಿಸಿ ಒಳ ಕಳಿಸಲು ಆದೇಶಿಸುತ್ತಾನೆ. ಸಾಧುವಿನ ಕೇಸರಿ ಬಟ್ಟೆಯನ್ನು ಕಳಚಿ ಹಸಿರು ಬಟ್ಟೆಯನ್ನು ತೊಡಿಸಿ ಸೈನಿಕರು ಸಾಧುವನ್ನು ಅರಮನೆ ಒಳಗೆ ಕರೆತರುತ್ತಾರೆ. ಅರಮನೆ ಪೂರ್ತಿಯಾಗಿ ಹಸಿರುಮಯವಾಗಿದ್ದನ್ನು ಕಂಡು ಸಾಧು ಆಶ್ಚರ್ಯದಿಂದ ನೋಡುತ್ತಾ ಮಹಾರಾಣಿಯ ಬಳಿ ತೆರಳುತ್ತಾನೆ. ಮಹಾರಾಣಿ ಆ ಸಾಧುವನ್ನು ನೋಡುತ್ತಿದ್ದಂತೆ ಎದ್ದು ನಿಂತು ನಮಸ್ಕರಿಸುತ್ತಾಳೆ. "ಸ್ವಾಮಿಗಳೇ, ನೀವು ಮಾಡಿದ ಚಿಕಿತ್ಸೆಯಿಂದಾಗಿ ನನ್ನ ಕಣ್ಣುಗಳು ನಿಧಾನವಾಗಿಯಾದರೂ ದಿನೆ ದಿನೆ ವಾಸಿಯಾಗುತ್ತಿದೆ. ನನ್ನ ದೃಷ್ಟಿ ಶಕ್ತಿ ಇನ್ನಷ್ಟು ಬೇಗ ಮರಳಿ ಬರುವಂತೆ ಏನಾದರೂ ಮಾಡಲು ಸಾಧ್ಯವೇ…" ಎಂದು ಮಹಾರಾಣಿ ಕೇಳಿತಿದಂತೆ. ಸಾಧುವಿನ ಆಗಮನದ ಬಗ್ಗೆ ತಿಳಿದು ಮಹಾರಾಣಿಯವರ ಕೊಠಡಿಗೆ ಬಂದ ರಾಜ ಸಾಧುವಿಗೆ ಪ್ರಾಣಾಮಗಳನ್ನು ತಿಳಿಸಿ ಹೀಗೆಂದು ನುಡಿದ "ಸಾಧು ಮಹಾಪುರುಷರೇ, ನೀವು ಹೇಳಿದಂತೆಯೇ ರಾಣಿಯ ಕಣ್ಣಿಗೆ ಬರೆ ಹಸಿರನ್ನು ಮಾತ್ರ ಕಾಣುವಂತೆ ಮಾಡಿದ್ದೇನೆ. ಆದರೂ ಕೂಡ ಮಂದಗತಿಯಲ್ಲಿ ಫಲವನ್ನು ಕೊಡುತ್ತಿದೆ. ದಯಮಾಡಿ ಶೀಘ್ರ ಪರಿಹಾರಕ್ಕೆ ಇನ್ನೇನು ಮಾಡಬೇಕೆಂದು ತಿಳಿಸಿ." ರಾಜ ರಾಣಿಯರ ಮಾತನ್ನು ಕೇಳಿ ನಡೆದ ವಿದ್ಯಾಮಾನದ ಬಗ್ಗೆ ಅರ್ಥ ಮಾಡಿಕೊಂಡ ಸಾಧುವು ಜೋರಾಗಿ ನಗಲಾರಂಭಿಸಿದ. "ಅಯ್ಯೋ ರಾಜ… ರಾಣಿಯೂ ಹಸಿರನ್ನೇ ನೋಡಬೇಕೆಂದಿದ್ದು ನಿಜ. ಹಸಿರು ನೋಡಿದರೆ ದೃಷ್ಟಿ ಶಕ್ತಿ ಹೆಚ್ಚಾಗುತ್ತದೆ ಎಂದಿದ್ದು ನಿಜ. ಆದರೆ ಆ ಕಾರಣಕ್ಕೆ ಇಡೀ ನಿನ್ನ ಅರಮನೆಯನ್ನು ಹಸಿರು ಬಣ್ಣಗೊಳಿಸಬೇಕೆಂದಲ್ಲ. ನಿನ್ನ ಮಂತ್ರಿ ಸೈನಿಕರಿಗೆಲ್ಲ ಹಸಿರು ಬಣ್ಣದ ಬಟ್ಟೆ ಹಾಕಬೇಕೆಂದಲ್ಲ. ಹೀಗೆ ನನ್ನಂತೆ ಬಂದು ಹೋಗುವವರಿಗೆಲ್ಲ ಹಸಿರು ಬಣ್ಣ ತೊಡಿಸು ಎಂದಲ್ಲ.‌ ಸುಮ್ಮನೆ ಸರಳವಾಗಿ ಒಂದು ಹಸಿರು ಬಣ್ಣದ ಕನ್ನಡಕ ತೊಡಿಸಿದ್ದರೆ ಸಾಕಾಗುತ್ತಿತ್ತು. ವಾರ ಹತ್ತು ದಿನಗಳಲ್ಲಿ ರಾಣಿಯ ಕಣ್ಣು ಮೊದಲಿನಂತಾಗುತ್ತಿತ್ತು." ಎಂದು ತಲೆ ಚಚ್ಚಿಕೊಂಡು ಸಾಧು ಹೇಳಿದರು.‌

ನಾವುಗಳು ಅಷ್ಟೇ. ನಮ್ಮ ನಮ್ಮ ಜೀವನದಲ್ಲಿ ನಮ್ಮ ದಿನನಿತ್ಯದ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಕೊಂಡಿಕೊಳ್ಳುವ ಸಲುವಾಗಿ ನಮ್ಮ ಸುತ್ತಲಿನ ಜಗತ್ತನ್ನೇ ಬದಲಾಯಿಸಲು ಹೊರಟಿರುತ್ತೇವೆ. ಅದಕ್ಕಾಗಿ "ನಮಗೆ ತೋಚಿದ" "ನಮಗೆ ಸರಿ" ಎನಿಸುವ ಏನೇನೋ ಹುಚ್ಚು ಪ್ರಯತ್ನಗಳನ್ನು ಹೋರಾಟಗಳನ್ನು ಸೆಣಸಾಟಗಳನ್ನು ಮಾಡುತ್ತಿರುತ್ತೇವೆ. ಆದರೆ ಆ ಸಮಸ್ಯೆಗಳಿಗೆ ಪರಿಹಾರ ಬಹಳ ಬಹಳ ಬಹಳ ಸರಳವಾಗಿರುತ್ತವೆ. ಆ ಪರಿಹಾರಗಳನ್ನು ತತ್ಕ್ಷಣಕ್ಕೆ ಗುರುತಿಸಲು ವಿಫಲರಾಗಿರುತ್ತೇವೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಹಾಸ್ಯಸ್ಪದವು ಹೌದು. ಚೈನೀಸ್ ತತ್ವಜ್ಞಾನಿ Confucius ಹೇಳುವಂತೆ "Life is really simple, but we insist on making it complicated." ಎನ್ನುವುದು ಎಷ್ಟು ನಿಜವೆಂದು ಅರಿವಾಗುತ್ತದೆ.

ನಮಸ್ಕಾರ 

ಎಂದೆಂದಿಗೂ ನಿಮ್ಮವ, 
ಮಹೇಶ್ ಬಿ ಜೋಗಿ

Comments

  1. ಎರಡು ನಿಮಿಷದಲ್ಲಿ ಓದಿ ಮುಗಿಸಬಹುದಾದರು 10 ನಿಮಿಷ ಆಲೋಚಿಸಬೇಕಾದಂತ ಒಳ್ಳೆಯ ನೀತಿ ಕಥೆ

    ReplyDelete
  2. ಹೌದು😌 ಧನ್ಯವಾದಗಳು 🙏

    ReplyDelete

Post a Comment