ಮತ್ತೊಮ್ಮೆ ಪ್ರಸಿದ್ಧ ಕಥೆ...

ನಮಸ್ಕಾರ

ನೆನ್ನೆ ಹೇಳಿದ ರಾಜ ರಾಣಿ ಕಥೆಯ ಥರವೇ ಈ ಕಥೆಯು ಇದೆ. ಪಾತ್ರಗಳೆಲ್ಲ ಹೆಚ್ಚು ಕಮ್ಮಿ ಅದೇ. ಅದೇ ರಾಜ್ಯ ಅದೇ ರಾಜ ಅದೇ ರಾಣಿ ಅದೇ ಮಂತ್ರಿ. ಕಥೆಯ ಸನ್ನಿವೇಶಗಳು ಬೇರೆಯಾದರೂ ಕಥೆಯ ಕ್ಲೈಮ್ಯಾಕ್ಸ್ ಒಂದೇ. ಕಥೆಯ core objective ಒಂದೇ. ಕಥೆ ಹೇಳುವ ನೀತಿ ಪಾಠ ಒಂದೇ ಆದರೂ ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಂಡು ನಮ್ಮ ನಮ್ಮ ಅರಿವಿಗೆ ತಕ್ಕಂತೆ ನೀತಿ ಮುತ್ತುಗಳನ್ನು ಎತ್ತಿಕೊಳ್ಳಬಹುದು. ಇನ್ನೊಂದು ರೀತಿಯಲ್ಲಿ ಹೇಳಬಹುದೆಂದರೆ ಅದೊಂದು ಕಾಲದಲ್ಲಿ ಬಹುಪಾಲು ತೆಲುಗು ಚಲನಚಿತ್ರಗಳು ಎರಡು ಮನೆತನಗಳ ಮಧ್ಯ ಇದ್ದ ದ್ವೇಷದ ಕಥೆಯನ್ನೇ ಪ್ರೇಕ್ಷಕ ಮಹಾಶಯರಿಗೆ ಪ್ರಸ್ತುತಪಡಿಸುತ್ತಿದ್ದರು. ಬೇರೆ ಬೇರೆ ನಿರ್ದೇಶಕರು, ಬೇರೆ ಬೇರೆ ನಿರ್ಮಾಪಕರು, ಬೇರೆ ಬೇರೆ ನಟರು. ಆದರೆ ಕಥೆ ಮತ್ತು ಪ್ರೇಕ್ಷಕ ಮಹಾಶಯ ಮಾತ್ರ ಬದಲಾಗದೆ ಇದ್ದಿದ್ದು. ಅದೇ ಕಥೆ ಅದೇ ಪ್ರೇಕ್ಷಕ ಅದೇ ಕ್ಲೈಮ್ಯಾಕ್ಸ್ ಅದೇ ಹೊಡೆದಾಟ ಬಡಿದಾಟ ಅದೇ ಕಿವಿ ತಮಟೆ ಕಿತ್ತೋಗುವಂತ ಸೌಂಡ್ ಎಫೆಕ್ಟ್ ಗಳು. ಅಂತೆಯೇ ಒಂದೇ ಕಥೆಯನ್ನು ಬೇರೆ ಬೇರೆ ರೀತಿಯಲ್ಲಿ ಹೇಳಬಹುದು… ಆ ಕಥೆ ಹೀಗಿದೆ…

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆ ರಾಜನು ಒಂದು ದೊಡ್ಡ ರಾಜ್ಯವನ್ನು ಆಳುತ್ತಿದ್ದ. ಆ ರಾಜ್ಯದಲ್ಲಿ ಹತ್ತಾರು ಊರುಗಳು ಹತ್ತಾರು ಹಳ್ಳಿಗಳು ಹಾಗೂ ಕಾಡುಗಳು ಬೆಟ್ಟಗುಡ್ಡಗಳು ನದಿ ಸರೋವರಗಳು ಕೆರೆಗಳು ಇದ್ದವು. ಆ ರಾಜನಿಗೆ ತನ್ನ ರಾಜ್ಯ ತನ್ನ ಪ್ರಜೆಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಆ ಪ್ರಜೆಗಳಿಗೂ ಅಷ್ಟೇ ತಮ್ಮ ರಾಜನೆಂದರೆ ಅದೇನೋ ಗೌರವ ಅಗಾಧವಾದ ರಾಜ ಭಕ್ತಿ. ಹೀಗಿರುವಾಗ ಒಮ್ಮೆ ಮಹಾರಾಜನು ಬೇಟೆಯಾಡಲು ಕಾಡಿಗೆ ಹೋದ. ಬೇಟೆಯಾಡುವ ಬರದಲ್ಲಿ ತನ್ನ ರಥದಿಂದ ಕೆಳಗಿಳಿದು ತನ್ನ ಕಣ್ಣಿಗೆ ಬಿದ್ದ ಜಿಂಕೆ ಹಿಂದೆ ಮೆಲ್ಲನೆ ಹೆಜ್ಜೆ ಹಾಕಿದ. ತನ್ನ ಚರ್ಮದ ಚಪ್ಪಲಿ "ರಪ ರಪ" ಎಂದು ಸದ್ದು ಮಾಡುತ್ತಿದೆ ಎಂದು ಚಪ್ಪಲಿ ಬಿಚ್ಚಿ ನಡೆಯಲಾರಂಬಿಸಿದ. ಒಂದ್ ಹತ್ತು ಹೆಜ್ಜೆ ಇಡುತ್ತಿದ್ದಂತೆ ಒಂದು ಸಣ್ಣ ಮುಳ್ಳು ರಾಜನ ಕಾಲಿಗೆ ಚುಚ್ಚಿ ರಾಜ "ಅಯ್ಯೋ…" ಎಂದು ಜೋರಾಗಿ ಕಿರಿಚಿಕೊಂಡ. ಮಹಾಮಂತ್ರಿಯು ರಾಜನ ನೋವಿನ ಕೂಗನ್ನು ಕೇಳಿ ಸೈನಿಕರ ಜೊತೆ ಓಡಿಬರುತ್ತಾನೆ. ಬಲ ಕಾಲಿಗೆ ಮುಳ್ಳು ಚುಚ್ಚಿಸಿಕೊಂಡು ಒಂಟಿ ಕಾಲಿನಲ್ಲಿ ನಿಂತಿದ್ದ ರಾಜನನ್ನು ಕಂಡ ಮಹಾಮಂತ್ರಿಯು ಪಕ್ಕದಲ್ಲಿದ್ದ ಸೈನಿಕನಿಗೆ ಮುಳ್ಳು ತೆಗೆದು ಚಿಕಿತ್ಸೆ ನೀಡುವಂತೆ ಸನ್ನೆಯಲ್ಲೇ ಆದೇಶ ನೀಡಿದನು. ಅಂತೆಯೇ ಮುಳ್ಳು ತೆಗೆದು ರಾಜನನ್ನು ಅರಮನೆಗೆ ಕರೆತರಲಾಗುತ್ತದೆ. ರಾಜನಿಗೆ ಆ ರಾತ್ರಿ ನಿದ್ದೆ ಬರಲಿಲ್ಲ. ಕಾಲಿನ ನೋವು ನಿದ್ದೆಗೆ ಅಡ್ಡಿಯಾಗಿದ್ದಕ್ಕಿಂತ ರಾಜನಿಗೆ ಕಾಡುತ್ತಿದ್ದ ಆ ಒಂದು ಚಿಂತೆ ರಾಜನ ನಿದ್ದೆಗೆ ಅಡ್ಡಿಯಾಗಿತ್ತು. ತನ್ನ ಪ್ರಜೆಗಳನ್ನು ತನ್ನ ಮಕ್ಕಳಂತೆ ಪ್ರೀತಿಸುತ್ತಿದ್ದ ರಾಜನಿಗೆ ತನ್ನ ಬಡ ಪ್ರಜೆಗಳು ಕಟ್ಟಿಗೆ ತರಲೊ ಸೊಪ್ಪು ತರಲೊ ಬೇಟೆ ಆಡಲೊ ದನ-ಕರುಗಳನ್ನು ಮೇಯಿಸಲೊ ಕಾಡಿಗೆ ಹೋದಾಗ ಅಥವಾ ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಕಾಡು ದಾಟಿ ಹೋಗುವಾಗ ತನಗೆ ಚುಚ್ಚಿದಂತೆ ತನ್ನ ಪ್ರಜೆಗಳಿಗೂ ಮುಳ್ಳು ಚುಚ್ಚಿದಾಗ ಪಾಪ ತನ್ನ ಪ್ರಜೆಗಳು ಎಷ್ಟೆಲ್ಲ ಯಾತನೆ ಅನುಭವಿಸಬೇಕಲ್ಲವೇ ಎಂಬ ಚಿಂತೆಯಲ್ಲಿ ಮುಳುಗಿದ್ದ. 

ಮಾರನೇ ದಿನ ಬೆಳಗ್ಗೆ ತನ್ನ ಮಹಾಮಂತ್ರಿಗೆ ತನ್ನ ರಾಜ್ಯದಲ್ಲಿರುವ ಎಲ್ಲಾ ಕಾಡುಗಳು ಮುಳ್ಳು ಮುಕ್ತವನ್ನಾಗಿ ಮಾಡಬೇಕೆಂದು ಆದೇಶಿಸಿದ. ರಾಜಾಜ್ಞೆಯಂತೆ ಮಹಾಮಂತ್ರಿಯು ಕೆಲಸಕ್ಕೆ ಜನರನ್ನು ಕರೆದು ಕಾಡುಗಳನ್ನು ಮುಳ್ಳು ಮುಕ್ತವನ್ನಾಗಿ ಮಾಡಲು ಯೋಜನೆ ರೂಪಿಸಿದ. ಅಂತೆಯೇ ಹಂತ ಹಂತವಾಗಿ ಮುಳ್ಳುಗಳನ್ನು ಒಂದು ಕಡೆಯಿಂದ ಗುಡಿಸಿ ತಂದು ಸುಡುವುದಾಗಿ ತೀರ್ಮಾನಿಸಿದ. ಕಾಲಕಾಲಕ್ಕೆ ಮುಳ್ಳುಗಳು ಬೆಳೆಯುತ್ತಲೇ ಇರುವುದೆಂದು ಈ ಕೆಲಸಕ್ಕೆಂದೇ ಒಂದಿಷ್ಟು ಮಂದಿಯನ್ನು ನೇಮಿಸಿಯೇ ಬಿಟ್ಟ. ಹೀಗೆ ವಾರ ಹತ್ತು ದಿನ ಕಳೆಯಿತು. ಎಲ್ಲವನ್ನು ತ್ಯಜಿಸಿ ಎಲ್ಲೂ ನಿಲ್ಲದೆ ಊರೂರು ಅಲೆಯುವ ಸಾಧು ಒಬ್ಬರು ಈ ರಾಜನ ರಾಜ್ಯಕ್ಕೂ ಅಲೆಯುತ್ತ ಬಂದರು. ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಕಾಡು ಮಾರ್ಗವಾಗಿ ಹೋಗುವಾಗ ಒಂದಿಷ್ಟು ಜನ ಈ ಮುಳ್ಳನ್ನು ಗುಡಿಸುತ್ತಿದ್ದನ್ನು ಕಂಡು ಆಶ್ಚರ್ಯದಿಂದ ಆ ಸಾಧು "ಏನು ಮಾಡುತ್ತಿದ್ದೀರಿ…" ಎಂದು ಕೇಳಿದ. ವಿಷಯ ತಿಳಿದ ಸಾಧು ಜೋರಾಗಿ ನಗಲಾರಂಭಿಸಿ "ಅಲ್ಲ ಕಂಡ್ರೆಯ್ಯ, ನಿಮ್ಮ ರಾಜನಿಗೆ ಬುದ್ಧಿ ಇಲ್ವಾ… ಇಡೀ ಕಾಡನ್ನೇ ಗುಡಿಸೋ ಬದಲು ಇಲ್ಲಿ ಓಡಾಡೋರಿಗೆ ಒಂದ್ ಜೊತೆ ಚಪ್ಪಲಿ ಕೊಟ್ಟಿದ್ರೆ ಸಾಕಾಗ್ತಿತ್ತು ಅಲ್ವಾ…" ಎಂದು ಹೇಳಿದರು. ಸಾಧುವಿನ ಮಾತನ್ನು ಕೇಳಿ ಅಲ್ಲಿದ್ದ ಜನ "ಅದು ನಮಗೂ ಗೊತ್ತು ಸ್ವಾಮಿ, ಆದರೆ ಈ ಮಾತನ್ನು ರಾಜನಿಗೆ ಯಾರು ಹೇಳೋರು…" ಎಂದು ಹೇಳಿ ಮತ್ತೆ ಕೆಲಸವನ್ನು ಮುಂದುವರಿಸಿದರು. 

ನಮ್ಮ ಕುರುಡು ಪ್ರೀತಿ ನಮ್ಮ ಅಜ್ಞಾನ-ಅಲ್ಪಜ್ಞಾನದ ಜೊತೆ ಸೇರಿ ನಮ್ಮಿಂದ ಹೇಗೆಲ್ಲಾ ಪ್ರಯೋಜನವಿಲ್ಲದ, ಫಲ ನೀಡದ ಹುಚ್ಚು ಕೆಲಸಗಳನ್ನು ಮಾಡಿಸುತ್ತದೆ ಎನ್ನುವುದನ್ನು ಈ ಕಥೆಯಲ್ಲಿ ಕಾಣಬಹುದು. ರಾಜನು ಕಾಡನ್ನು ಸ್ವಚ್ಛಗೊಳಿಸುವುದು ಇರಲಿ ಓಡಾಡುವ ಮಂದಿಗೆ ಚಪ್ಪಲಿ ಕೊಡುವ ಅವಶ್ಯಕತೆಯೂ ಇಲ್ಲ. ದಿನನಿತ್ಯ ಓಡಾಡುವ ಮಂದಿಗೆ ಅದು ಅಭ್ಯಾಸವಾಗಿರುತ್ತದೆ. ಕಾಡಲ್ಲಿ ಮುಳ್ಳು ಕೆರೆಯಲ್ಲಿ ಕಲ್ಲು ಸರ್ವೇಸಾಮಾನ್ಯವಾದ ಪ್ರಕೃತಿ ನಿಯಮ. ಅಂತಯೇ ನಮ್ಮ ನಮ್ಮ ಜೀವನದಲ್ಲಿ ಸಣ್ಣಪುಟ್ಟ ಲೋಪದೋಷಗಳು ಇದ್ದೇ ಇರುತ್ತವೆ. ಜೀವನದಲ್ಲಿ ಹೊಂದಿಕೊಂಡು ಹೋಗುವ ಪ್ರಕೃತಿ ಬೆಳೆಸಿಕೊಂಡು ಸಾಗಬೇಕು ಅಷ್ಟೇ. ರೂಮಿ ಹೇಳುತ್ತಾನೆ "Yesterday I was clever, so I wanted to change the world. Today I am wise, so I am changing myself." ರೂಮಿ ಹೇಳುವಂತೆ Let us be wise. ಉತ್ತಮವಾಗಲು ಬದಲಾಗೋಣ.

ನಮಸ್ಕಾರ 

ಎಂದೆಂದಿಗೂ ನಿಮ್ಮವ, 
ಮಹೇಶ್ ಬಿ ಜೋಗಿ

Comments