ಭಕ್ತರನ್ನು ನಿತ್ಯ ಕಾಯುವ ಮಾರುತಿ

|| ಜೈ ಶ್ರೀರಾಮ್ ||

ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ | 
ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ ||

ಎಲ್ಲರಿಗೂ ವೈಕುಂಠ ಏಕಾದಶಿಯ ಶುಭಾಶಯಗಳು ಹಾಗೂ ನೂತನ ವರ್ಷ ೨೦೨೩ರ ಶುಭಾಶಯಗಳು.


ಇದು ನಡೆದಿದ್ದು ಬೆಂಗಳೂರು ಮಹಾನಗರವೆಂಬ ಮಾಯಾನಗರಿಯಲ್ಲಿ. ಅದು ಕೆಲ ದಶಕಗಳ ಹಿಂದಿನ ಘಟನೆ. ಆಗ ಬೆಂಗಳೂರಿನಲ್ಲಿ ಈಗಿರುವಷ್ಟು ಜನಜಂಗುಳಿ ಇರಲಿಲ್ಲ. ಈಗ ಕಾಣೆಯಾಗಿರುವ ಮರಗಳು ಉದ್ಯಾನವನಗಳು ಆಗ ರಸ್ತೆ ಬದಿಗಳಲ್ಲಿ ಬೀದಿ ಕೊನೆಗಳಲ್ಲಿ ಹಸಿರಿನಿಂದ ಮೈತುಂಬಿಕೊಂಡು ರಾರಾಜಿಸುತ್ತಿದ್ದವು. ಅದು ಯಾವುದೋ ಬಡಾವಣೆ. ಅದೇ… "ಲೇಔಟ್". ಅಲ್ಲಿ ಹತ್ತಾರು ನೂರಾರು ಮನೆಗಳು ಸಂಸಾರಗಳು. ಹೀಗೆ ಒಂದು ಕುಟುಂಬ ಅಲ್ಲಿ ತಮ್ಮ ಸ್ವಂತ ಮನೆಯಲ್ಲಿ ವಾಸವಾಗಿತ್ತು. ಆ ಮನೆಯ ಮನೆ ಮಂದಿ ಎಲ್ಲಾ ದೈವ ಭಕ್ತರು. ಆಚಾರ ವಿಚಾರ, ಮಡಿ ಮೈಲಿಗೆ, ಪೂಜೆ ಪುನಸ್ಕಾರಗಳೆಲ್ಲ ಸ್ವಲ್ಪ ಹೆಚ್ಚಾಗಿಯೇ ನಡೆಯುತ್ತಿತ್ತು. ಹೀಗಿರುವಾಗ ಆ ಮನೆಗೆ ಅಂಟಿಕೊಂಡಿರುವ ಪಕ್ಕದ ಮನೆಗೆ ಮತ್ತೊಂದು ಕುಟುಂಬ ಬಾಡಿಗೆಗೆ ಬಂದರು. ಆ ಬಾಡಿಗೆಗೆ ಬಂದ ಕುಟುಂಬದವರು ನಾಸ್ತಿಕರು. ಆಚಾರದಲ್ಲಿ ನಂಬಿಕೆ ಇಲ್ಲ ಇನ್ನೂ ವಿಚಾರಗಳೆಂದರೆ ಅವರದ್ದೇ ಬೇರೆ ವಿಚಾರಧಾರೆಗಳು. ಹಾಗಾಗಿ ಆ ಮನೆಯವರಿಗೂ ಈ ಮನೆಯವರಿಗೂ ಅಷ್ಟಾಗಿ ಸ್ನೇಹ ಬೆಳೆಯಲಿಲ್ಲ. ದಿನ ಕಳೆದಂತೆ ಆ ದೈವ ಭಕ್ತರ ಮನೆಯಲ್ಲಿ ನಡೆಯುತ್ತಿದ್ದ ಹಬ್ಬ ಹುಣ್ಣಿಮೆ ಹರಿದಿನಗಳ ಆಚರಣೆ ಈ ನಾಸ್ತಿಕ ಮನೆಯ ಯಜಮಾನನಿಗೆ ಮೈ ಉರಿಯುವಂತೆ ಮಾಡುತ್ತಿತ್ತು. ಆ ಸಜ್ಜನ ಆಸ್ತಿಕರು ಅದೆಷ್ಟೇ ಸಭ್ಯವಾಗಿ ಸರಳವಾಗಿ ತಮ್ಮ ಪೂಜೆ ಪುನಸ್ಕಾರಗಳನ್ನು ಮಾಡಿಕೊಳ್ಳುತ್ತಿದ್ದರು ಈ ನಾಸ್ತಿಕ ಮಾತ್ರ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಸರಿಯಾಗಿ ಪೂಜೆಯ ಸಮಯಕ್ಕೆ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುತ್ತಿದ್ದ. ಬೇಕಂತಲೇ ಪಕ್ಕದ ಮನೆಯ ಮುಂದೆ ಮಾಂಸದ ಕಸವನ್ನು ಹಾಕುವುದು, ದಿನಾ ವಿನಾಕಾರಣ ಕೂಗಾಡುವುದನ್ನು ಮಾಡುತ್ತಿದ್ದ. ಆ ಆಸ್ತಿಕರು ತಮ್ಮ ಆಚರಣೆಗಳಿಗೆ ತೊಂದರೆಯಾಗದಿರಲೆಂದು ಅದೆಷ್ಟೇ ನಾಜೂಕಾಗಿ ವರ್ತಿಸುತ್ತಿದ್ದರು ಈ ಮನುಷ್ಯನ ಕಿರಿಕಿರಿ ಮಾತ್ರ ನಿಲ್ಲುತ್ತಿರಲಿಲ್ಲ. ಆ ನಾಸ್ತಿಕನ ಮನೆಯವರು ಅವನಿಗೆ ಎಷ್ಟೇ ಪರಿ ಪರಿಯಾಗಿ ಬುದ್ಧಿ ಹೇಳಿದರು ಕೇಳದೆ ಪಕ್ಕದ ಮನೆಯವರಿಗೆ ಉಪಟಳ ಕೊಡುವುದನ್ನು ಮುಂದುವರಿಸಿದ್ದ. ಪಾಪ, ನೊಂದುಕೊಂಡ ದೈವ ಭಕ್ತರು ಶ್ರೀರಾಮನಿಗೆ ಕೈಮುಗಿದು ಸಮಾಧಾನ ಮಾಡಿಕೊಂಡು ಮನಸ್ಸಿಗೆ ಶಾಂತಿ ತಂದುಕೊಳ್ಳುತ್ತಿದ್ದರು. ಹೀಗೆ ಆರು ಏಳು ಬಾರಿ ನಡೆದಿರಬಹುದು. 

ಒಂದು ದಿನ ಬೆಳಗ್ಗೆ ನಾಸ್ತಿಕ ಮಹಾಶಯ ಇನ್ನೇನು ತನ್ನ ಕಚೇರಿಗೆ ಹೊರಡಬೇಕೆಂದು ಬಾಗಿಲು ತೆಗೆದು ಹೊರಗೆ ಒಂದ್ಹೆಜ್ಜೆ ಇಡುತ್ತಿದ್ದಂತೆ ಆ ದೃಶ್ಯ ನೋಡಿ ಅವಾಕ್ಕಾಗಿ ಗಾಬರಿಯಾಗಿ ಭಯದಿಂದ ಹಿಂದೆ ಸರಿದು ದಬ್ಬಾರನೇ ಬಾಗಿಲನ್ನು ಹಾಕಿದವನೇ "ಇವಳೇ… ಎಲ್ಲಾ ಕಿಟಕಿಗಳನ್ನು ಮುಚ್ಚೆ…" ಅಂತ ಕಿರಿಚಿದ. ಗಾಬರಿಗೊಂಡ ಹೆಂಡತಿ ಮಕ್ಕಳು ಓಡಿ ಬಂದು ಏನಾಯಿತೆಂದು ವಿಚಾರಿಸಿದಾಗ ಬಾಗಿಲು ಪಕ್ಕದಲ್ಲಿದ್ದ ಕಿಟಕಿಯಿಂದ ಇಣುಕಿ ನೋಡಲು ಹೇಳಿದ. 

ಅಲ್ಲಿ ಶ್ರೀರಾಮಚಂದ್ರ ಪ್ರಭುವಿನ ಬಂಟ ಹನುಮನ ನೂರಾರು ಸೈನಿಕರೇ ಅಲ್ಲಿ ದಾಳಿ ನಡೆಸಿದ್ದರು. ಕಿಟಕಿಯಿಂದ ನೋಡುತ್ತಿದ್ದವರಿಗೆ ಕೈ ಕಾಲು ನಡುಕ ಶುರುವಾಯಿತು. ಆ ನಾಸ್ತಿಕನಿಗಂತೂ ಅದೇನೋ ಹಿಂದೆ ಎಂದೂ ಕಾಣದ ಭಯ, ಜೀವವೇ ಹೋಗುವಂತಹ ಭಯ. ನೂರಾರು ವಾನರಗಳು… ಅದು ಬೆಂಗಳೂರಂತ "ಕಾಂಕ್ರೀಟ್ ನಗರ"ದಲ್ಲಿ… ಅಚಾನಕ್ಕಾಗಿ ದಿಢೀರನೆ ಪ್ರತ್ಯಕ್ಷವಾಗಿದ್ದವು. ವ್ಯಾಘ್ರವಾಗಿ ಕೂಗುತ್ತಾ ಭಯಂಕರವಾಗಿ ಕಿರುಚುತ್ತ ಅವನತ್ತ ಓಡೋಡಿ ದಾಳಿ ಮಾಡಿದ್ದವು. ದಬಾ ದಬಾ ದಬಾ ಎಂದು ಬಾಗಿಲು ಮುರಿದು ಹೋಗುವ ಹಾಗೆ ಒಡೆಯಲಾರಂಭಿಸಿದವು. ಕಿಟಕಿ ಗಾಜುಗಳನ್ನು ಕಲ್ಲಿನಿಂದ ಹೊಡೆದು ಪುಡಿ ಪುಡಿ ಮಾಡಿ ಮನೆ ಸುತ್ತಲೂ ಆವರಿಸಿ ಒಂದು ರೀತಿಯಲ್ಲಿ ದಾಂದಲೆಯನ್ನೇ ಮಾಡಿದವು. ಮನೆಯ ಮೇಲೆ ಬಿಸಿಲಿಗೆ ಹಾಕಿದ್ದ ಬಟ್ಟೆಗಳನ್ನೆಲ್ಲ ಕಿತ್ ಕಿತ್ ಹಾಕಿ ಹರಿದು ಬಿಸಾಡಿದವು. ಮನೆ ಮುಂದೆ ಇಟ್ಟಿದ್ದ ಹೂಕುಂಡಗಳನೆಲ್ಲ ಎತ್ತೆತ್ತಿ ಹೊಡೆದಾಕಿ ಮನೆ ಗೋಡೆಗಳನ್ನೆಲ್ಲ ಗಲೀಜು ಮಾಡಿ ಮನೆ ಮುಂದಿದ್ದ ಗೆಟನ್ನು ಕೊನೆಗೂ ಮುರಿದಾಕೆ ಬಿಟ್ಟವು. ಇಷ್ಟಕ್ಕೆ ನಿಲ್ಲದೆ ಆ ನಾಸ್ತಿಕನ ಗಾಡಿಗೂ ಒಂದು ಗತಿ ಕಾಣಿಸಿದವು. ಆ ಗಾಡಿಯ ಸೀಟನ್ನು ಚಿಂದಿ ಚಿಂದಿ ಮಾಡಿ ಅದರ ಲೈಟ್ ಮಿರರ್ನೆಲ್ಲ ಒಡೆದು ಹಾಕಿ, ದೊಡ್ಡ ದೊಡ್ಡ ಕಲ್ಲು ಇಟ್ಟಿಗೆಗಳನ್ನು ಹುಡುಕಿ ತಂದು ಆ ಗಾಡಿಯನ್ನು ನಜ್ಜುಗುಜ್ಜಾಗಿ ಮಾಡಿ ಅವನ ಗಾಡಿಯನ್ನು ಗುಜರಿ ಅವನು ಸಹ ಕೊಂಡೊಯ್ಯಲು ಇವನೇ ಕಾಸು ಕೊಡುವ ಸ್ಥಿತಿಗೆ ಆ ಗಾಡಿಯನ್ನು ತಂದು ನಿಲ್ಲಿಸಿದವು. ಪುಣ್ಯಕ್ಕೆ ಆ ವಾನರ ಸೇನೆಗೆ ಮನುಷ್ಯನ ರೀತಿ ಮಾತನಾಡಲು ಬರಲಿಲ್ಲ. ಇಲ್ಲ ಅಂದಿದ್ದರೆ… ಅಬ್ಬಬ್ಬಾ… ಅದು ಬೇರೆಯದ್ದೆ ಕಥೆಯಾಗಿರುತ್ತಿತ್ತು. ಆ ಬೆಂಗಳೂರಿನ Slang ನಲ್ಲಿ "ಏಯ್… Beep Beep Beep ನನ್ನ ಮಗನೇ ಬಾರೊ ಆಚೆ. ದಮ್ ಇದ್ರೆ ಬಾರೊ ಲೊ… Meter ಇಲ್ಲವೇನೋ Beep Beep Beep…" ಅಂತ ಆವಾಜ್ ಹಾಕುತಿದ್ದವೇನೊ. ಅಂತ ಸಂದರ್ಭದಲ್ಲಿ ಅವನೇನಾದರೂ ತುಟುಕ್ ಪಿಟಿಕ್ ಅಂದಿದ್ದರು The Vanara army would have come up with a whole new set of "Beep Beep Beep" for that fellow. ಅವನ ಪುಣ್ಯ, ವಾನರಗಳು ಮನುಷ್ಯರಂತೆ ಈ ಕಲಿಯುಗದಲ್ಲಿ ಮಾತಾಡಲ್ಲ.

ಹೀಗೆ ಒಂದರ್ಧ ಗಂಟೆ ಚೆನ್ನಾಗಿ ಆಟ ಆಡಿ ಅವನ ಮನೆ ಹಾಗೂ ಮನಸ್ಸನ್ನು ಚಿಂದಿಚಿಂದಿಯನ್ನಾಗಿ ಮಾಡಿ ಒಂದೊಂದೇ ಗುಂಪಾಗಿ ಎಲ್ಲಾ ವಾನರಗಳು ಹಿಂತಿರುಗಿದವು. ಆಶ್ಚರ್ಯ ಅಂದ್ರೆ ಈ ವಾನರಗಳಲ್ಲಿ ಯಾವ ಒಂದು ಪುಟ್ಟ ಮಂಗವು ಅಪ್ಪಿ ತಪ್ಪಿಯು ಇನ್ಯಾರ ಮನೆಗೂ ನುಗ್ಗಿರಲಿಲ್ಲ. ಅಕ್ಕ ಪಕ್ಕ ಮನೆ ಎದುರಿನ ಮನೆಯವರ ಹೂಕುಂಡದ ಹೂವಿನ ಒಂದೇ ಒಂದು ದಳಕ್ಕೂ ಏನು ಆಗಿರಲಿಲ್ಲ. ಇನ್ಯಾರ ಮನೆಯ ಕರ್ಚಿಫ್ ಸಹ ಕಾಣೆಯಾಗಿರಲಿಲ್ಲ. ಭಯಭೀತನಾದ ಅವನು ಮನೆಯಲ್ಲಿ ಕುಸಿದು ಬಿದ್ದಿದ್ದ. ಮಾರನೇ ದಿನ ಕಚೇರಿಗೆ ಹೋದರೆ "You are fired" ಅಂತ ಕೆಲಸದಿಂದ ತೆಗೆದು ಹಾಕಿರುವ ಪತ್ರವನ್ನು ಕೊಟ್ಟು ಕಂಪನಿಯವರು ಮನೆಗೆ ಕಳುಹಿಸಿದರು. ಎಂದೂ ಬಾರದ ಕಂಪನಿ ಮಾಲೀಕ ಅವತ್ತೇ ಒಂದು ರೌಂಡ್ ಆಫೀಸ್ ನೋಡಲು ಬಂದಿದ್ದರಂತೆ. ಅವತ್ತೇ ಈ ಪುಣ್ಯಾತ್ಮ ಹೇಳದೆ ಕೇಳದೆ ಕೆಲಸಕ್ಕೆ ಗೈರು. "ಆ ಬೇಜವ್ಬಾಬ್ದಾರಿ ಮನುಷ್ಯನನ್ನು ಕೆಲಸದಿಂದ ತೆಗೆದಾಕ್ರಿ." ಅಂದರಂತೆ ಕಂಪನಿ ಮಾಲೀಕರು. ಮನೆ ಮಾಲೀಕರು ಇದನ್ನೆಲ್ಲ ಕಂಡು ಮನೆ ಖಾಲಿ ಮಾಡಲು ಹೇಳಿದರು. ತಿಂಗಳು ಎರಡು ತಿಂಗಳೇಕೆ ವಾರ ಹತ್ತು ದಿನದಲ್ಲೇ ಮನೆ ಖಾಲಿ ಮಾಡಿದರು. ಅಷ್ಟೇ, ಇನ್ನೇನು ಆಯ್ತಲ್ಲ.

ಆಸ್ತಿಕರೆಯಲ್ಲ ಪುಣ್ಯವಂತರು, ಸಜ್ಜನರು, ಸುಶೀಲರು, ಸುಗುಣರು, ಆಚಾರ ವಿಚಾರವಂತರು ಅಂತೇನು ಇಲ್ಲ. ದೇವರನ್ನು ನಂಬಿದವರೂ, ದೇವರ ಪೂಜೆ ಪುನಸ್ಕಾರಗಳನ್ನು ಮಾಡಿಯೂ ಹಲ್ಕಾ ಕೆಲಸಗಳನ್ನು ಮಾಡುವವರಿದ್ದಾರೆ. ದೇವರ ಅಸ್ತಿತ್ವವನ್ನು ನಂಬದೇ ಒಳ್ಳೆಯ ಮನುಷ್ಯರಾಗಿ ನಾ ನಾ ಸತ್ಕಾರ್ಯಗಳನ್ನು ಮಾಡುವವರಿದ್ದಾರೆ. ದೇವರನ್ನು ನಂಬದೇ ಇರುವುದು ತಪ್ಪಲ್ಲ. ಆದರೆ ಬೇರೆಯವರ ನಂಬಿಕೆಗೆ ಧಕ್ಕೆ ತರುವುದಾಗಲಿ ತೊಂದರೆ ಕೊಡುವುದಾಗಲಿ ಅದು ತಪ್ಪು ಹಾಗೂ ಅವಿವೇಕಿ ಕಿಡಿಗೇಡಿತನವಾಗುತ್ತದೆ. ಇಲ್ಲಿ ರಾಮ ಭಕ್ತರಿಗೆ ಆಗುತ್ತಿದ್ದ ತೊಂದರೆಗೆ ಪರಿಹಾರವಾಗಿ ಶ್ರೀರಾಮನ ಬಂಟ ಆಂಜನೇಯ ಸ್ವಾಮಿಯೇ ತನ್ನ ವಾನರ ಪಡೆಗೆ "ಅದೇನು ಸ್ವಲ್ಪ ನೋಡ್ಕೊಂಡು ಬನ್ರೊ" ಅಂತ ಹೇಳಿ ಕಳಿಸಿದ್ದಂತಿದೆ. ರಾಮಭಕ್ತ ಮಾರುತಿ ರಾಮಭಕ್ತರನ್ನು ಹಾಗೂ ತನ್ನ ಭಕ್ತರನ್ನು ಸದಾ ರಕ್ಷಿಸಿ ಉದ್ಧಾರಸುತ್ತಾನೆ‌ ಎನ್ನುವುದಕ್ಕೆ ಅಸಂಖ್ಯಾ ಸಾಕ್ಷಿಗಳಲ್ಲಿ ಇದು ಒಂದು. 

ಭಕ್ತೀಲಿ ಶಕ್ತಿ ಕಂಡನೋ ಹನುಮ
ರಾಮನ್ನೇ ಗೆದ್ದು ಬಿಟ್ಟನೊ ||
ಭಕ್ತರನ್ನು ನಿತ್ಯ ಕಾಯುವ ಮಾರುತಿ
ಪ್ರೀತಿಯಿಂದ ಬಂದು ಹರಸುವ ||
( "ಪ್ರೇಮಬರಹ" ಚಿತ್ರದ ಹಾಡಿನ ಸಾಲುಗಳು)

|| ಜೈ ಶ್ರೀರಾಮ್ ||

ಎಂದೆಂದಿಗೂ ನಿಮ್ಮವ,
ಮಹೇಶ್ ಬಿ ಜೋಗಿ 


Comments

  1. ಆಸ್ತಿಕರಿಗೆ ಒಂದು ಒಳ್ಳೆಯ ಸಂಗತಿ

    ReplyDelete

Post a Comment