He is your Medicine

|| ಜೈ ಶ್ರೀರಾಮ್ ||

ರಾಮದೂತ ಹನುಮಂತ ಜಯಂತಿಯ ಶುಭಾಶಯಗಳು✨


ಬೆಂಗಳೂರು ಮಾಯನಗರಿಯಲ್ಲಿ ಒಂದು ಕ್ಲಿನಿಕ್. ಕ್ಲಿನಿಕ್ ಗೆ ದಿನನಿತ್ಯ ಹತ್ತಾರು ರೋಗಿಗಳು ಬಂದು ಹೋಗುತ್ತಿದ್ದರು. ಹೀಗೆ ಒಂದು ದಿನ ಕ್ಲಿನಿಕ್ ಗೆ ಬಂದ ವ್ಯಕ್ತಿ ಟೋಕನ್ ಪಡೆದು ಸರತಿ ಸಾಲಿನಲ್ಲಿ ಕೂತ. ಒಬ್ಬರಾದ ಮೇಲೆ ಒಬ್ಬರಂತೆ ಡಾಕ್ಟರ್ ಅನ್ನು ಕಾಣುತ್ತಿದ್ದ ರೋಗಿಗಳ ಸಾಲಿನಲ್ಲಿ ಡಾಕ್ಟರ್ ಅನ್ನು ಭೇಟಿಯಾಗಲು ಕೈಕಟ್ಟಿಕೊಂಡು ಏನೋ ಕಳೆದುಕೊಂಡಂತೆ ಸಪ್ಪೆ ಮುಖ ಮಾಡಿಕೊಂಡು ತಲೆತಗ್ಗಿಸಿಕೊಂಡು ಕಾಯುತ್ತಿದ್ದ. ಅರ್ಧ ಮುಕ್ಕಾಲು ಗಂಟೆಯ ನಂತರ ಇವನ ಟೋಕನ್ ನಂಬರ್ ಕೂಗಿದಾಗ ಅದ್ಯಾವುದೋ ಬೇರೆ ಲೋಕದಲ್ಲಿ ಇದ್ದವನಂತೆ ಯೋಚನೆಯಲ್ಲಿ ಮುಳುಗಿದ್ದವನು ಯಾರೋ ಅವನಿಗೆ ಹಗ್ಗ ಕಟ್ಟಿ ವಾಸ್ತವಕ್ಕೆ ಹಿಡಿದು ಎಳೆದಿರುವಂತೆ ಎಚ್ಚರಗೊಂಡು ಎದ್ದು ಡಾಕ್ಟರ್ ಕೊಠಡಿಯ ಕಡೆ ಹೆಜ್ಜೆ ಹಾಕಿದ. ಒಳಗೆ ಮುಂದಿನ ಪೇಷಂಟ್ ಪ್ರಿಸ್ಕ್ರಿಪ್ಷನ್ ಗೆ ಡೇಟ್ ಬರೆಯುತ್ತಿದ್ದ ಡಾಕ್ಟರ್ ಬಂದಿರುವ ಪೇಷಂಟ್ ಕಡೆ ತಲೆ ಎತ್ತಿ ನೋಡದೆ "ಬನ್ನಿ. ಡೋರ್ ಕ್ಲೋಸ್ ಮಾಡಿ... ಕೂತ್ಕೊಳ್ಳಿ" ಎಂದು ಹೇಳಿದರು. ಡಾಕ್ಟರ್ ಡೆಸ್ಕ್ ಮುಂದಿದ್ದ ಚೇರಿನಲ್ಲಿ ಕೂತ ವ್ಯಕ್ತಿಗೆ ತಮ್ಮ ಪೆನ್ನನ್ನು ಪ್ರಿಸ್ಕ್ರಿಪ್ಷನ್ ಮೇಲಿಟ್ಟು ಮುಂದೆ ಕೂತಿರುವ ವ್ಯಕ್ತಿಯನ್ನು ನೋಡುತ್ತಾ "ಹೇಳಿ, ಏನ್ ಪ್ರಾಬ್ಲಮ್ಮು..." ಎಂದರು ಡಾಕ್ಟರ್. "ಡಾಕ್ಟರ್, ತುಂಬಾ stress ಇದೆ. ಯಾವುದಾದರೂ Stress relief tablet ಕೊಡಿ ಡಾಕ್ಟ್ರೇ" ಎಂದು ಉತ್ತರಿಸಿದ. ಅದಕ್ಕೆ ಡಾಕ್ಟ್ರು "ಈಗ Almost ಎಲ್ಲರಿಗೂ stress ಇದ್ದೇ ಇರುತ್ತೆ. ನಾವುಗಳೇ ಮಾಡಿಕೊಂಡಿರುವ ಲೈಫ್ ಸ್ಟೈಲೇ ಹಾಗಿದೆ. ಏನ್ ಮಾಡೋದು? ಇರ್ಲಿ ಹೇಳಿ Stress ಅಂದ್ರೆ ಯಾವ ಥರ?" ಅಂದಿದ್ದಕ್ಕೆ "(ತಡಬಡಾಯಿಸುತ್ತಾ ತೊದಲುತ್ತಾ)ಒಂಥರಾ... ಒಂಥರ... ಬೇ.. ಬೇಜಾರಲ್ಲಿರುತ್ತೇನೆ. ಏನೋ ಕಳ್ಕೊಂಡಿರೋ ತರ ಅನ್ಸುತ್ತೆ. (Heavy breathing) ರಾತ್ರಿ ಸರಿಯಾಗಿ ನಿದ್ದೆ ಬರೋಲ್ಲ. ಬೇಡದ ಯೋಚನೆಗಳು ಕಾಡ್ತಾವೆ. (ಒಂದು ಕ್ಷಣ ಸುಮ್ಮನಾಗಿ ಎದುಸಿರನ್ನು ಕಮ್ಮಿ ಮಾಡಿಕೊಂಡು Normal ಆಗಿ) ಖುಷಿಯಾಗಿರೋಕೆ ಏನಾದರೂ ಮಾತ್ರೆನೊ ಟಾನಿಕೊ ನಿದ್ದೆ ಮಾತ್ರೆಗಳೊ ಕೊಡಿ ಡಾಕ್ಟರೇ" ಎಂದು ಮಾತ್ರೆಗಳ ನಿರೀಕ್ಷೆಯಲ್ಲಿ ಕೂತ.

"ವೈದ್ಯೋ ನಾರಾಯಣೋ ಹರಿಃ" ಈಗಿನ "Medical Industry" ಜಮಾನದಲ್ಲೂ ಮಾನವೀಯತೆ ಹಾಗೂ ವೃತ್ತಿ ನೈತಿಕತೆಯನ್ನು ಉಳಿಸಿಕೊಂಡು ಅವುಗಳನ್ನು ಜೀವನದಲ್ಲಿ ಕೆಲಸದಲ್ಲಿ ಅಳವಡಿಸಿಕೊಂಡಿರುವ ಅದೆಷ್ಟೋ ವೈದ್ಯರಿದ್ದಾರೆ. ಹಾಗೆಯೇ ನಮ್ಮ ಡಾಕ್ಟರ್ ಸಹ ಆದಷ್ಟು without medication ರೋಗಿಯ ರೋಗವನ್ನು ವಾಸಿ ಮಾಡಲು ಪ್ರಯತ್ನಿಸುತ್ತಾರೆ. ಅಂತೆಯೇ ವ್ಯಕ್ತಿಯ ಸಮಸ್ಯೆಗೂ Tabletಗಳ ಮೊರೆ ಹೋಗುವ ಮುನ್ನ ಏನೆಲ್ಲ ಮಾಡಬಹುದು ಎಂದು ಎಲ್ಲಾ ಸಾಧ್ಯತೆಗಳನ್ನು ನೋಡುತ್ತಾರೆ.

ವ್ಯಕ್ತಿಯ ಮಾತನ್ನು ಕೇಳಿದ ಡಾಕ್ಟರ್ ಗೆ ತಕ್ಷಣ "He might need a psychotherapist" ಅನಿಸಿತು. ಆದರೆ "Or this might be just because of over work load or bad lifestyle" ಅಂತ ಯೋಚಿಸಿ ತಮ್ಮ rimless ಕನ್ನಡಕವನ್ನು ಬಹಳ ಡೆಲಿಕೇಟ್ ಆಗಿ ನಿಧಾನವಾಗಿ ತಮ್ಮ ಎರಡು ಕೈಗಳಿಂದ ತೆಗೆದು ಸ್ವಲ್ಪ ಮುಂದೆ ಬಾಗಿ with a smiling face ವ್ಯಕ್ತಿಯನ್ನೇ ನೋಡುತ್ತಾ "ನೋಡಿ ಇವರೇ... ಇವೆಲ್ಲ ಈಗ ತುಂಬಾ ಮಾಮೂಲು ಸ್ಟ್ರೆಸೂ, ಬೇಜಾರು, ಓವರ್ ಥಿಂಕಿಂಗೂ, ನೆಗೆಟಿವ್ ಥಿಂಕಿಂಗೂ, ನಿದ್ದೆ ಬರದೇ ಇರೋದು ಇವೆಲ್ಲ ಸರ್ವೇ ಸಾಮಾನ್ಯವಾಗೋಗಿದೆ. ಈಗ ನನ್ನೇ ನೋಡಿ ರಾತ್ರಿ ಊಟ ಮಾಡಿ ಫೋನ್ ಆಫ್ ಮಾಡಿ ಒಂದು ಅರ್ಧ ಗಂಟೆ ವಾಕ್ ಮಾಡಿ ಒಂದ್ ಹತ್ತು ಪೇಜ್ ಒಳ್ಳೆ ಕಥೆ ಕಾದಂಬರಿನೋ ಓದಿಲ್ಲ ಅಂದ್ರೆ ನಿದ್ದೆನೇ ಬರಲ್ಲ ಅಂತೀನಿ. ನೀವು ಒಂದ್ ಕೆಲ್ಸ ಮಾಡಿ. ಮಾತ್ರೆ ಗೀತ್ರೆ ಎಲ್ಲ ಏನು ಬೇಡ. ಬೆಳಗ್ಗೆ ಒಂದು ಐದೂವರೆ ಆರಕ್ಕೆ ಎದ್ದು ಒಂದು ಗಂಟೆ ಒಳ್ಳೆ ಲೈಟ್ ಆಗಿ ವ್ಯಾಯಾಮ ಶುರು ಮಾಡ್ಕೊಳ್ಳಿ. ಸಾಯಂಕಾಲ ಆರರಿಂದ ಏಳು ಗಂಟೆ ಒಂದ್ hour ಪ್ರಾಣಾಯಾಮ ಮಾಡಿ. ಏಳುವರೆ ಎಂಟಕ್ಕೆ ಊಟ ಮುಗಿಸಿ same ನನ್ನಥರನೇ One hour walk, 10-15 pages good book reading. ಜಾಸ್ತಿ ಯೋಚನೆ ಮಾಡಬೇಡಿ ಇವರೇ. ಸುಸ್ತೆನಾದ್ರೂ ಆಗುತ್ತಾ ಹೇಳಿ, ಅದಕ್ಕೆ supplement tablets ಬರ್ಕೊಡ್ತೀನಿ...ಹಾ...Best... ಒಂದು ಹದಿನೈದು ಇಪ್ಪತ್ತು ದಿನಗಳಿಂದ ಇಲ್ಲೇ ಪಕ್ಕದ ರೋಡಿನಲ್ಲಿರುವ ಆಜಾದ್ ಗ್ರೌಂಡಿನಲ್ಲಿ ಸರ್ಕಸ್ ನಡಿತಿದೆ. ಅಲ್ಲಿ ಪ್ರತಿದಿನ ಸಂಜೆ ಒಂದು ಜೋಕರ್ ಶೋ ಇರುತ್ತೆ. ಹೋಗಿ ನೋಡಿ ಬಹಳ ಚೆನ್ನಾಗಿದೆ. ನಾನು ಕಳೆದ ವಾರ ಹೋಗಿದ್ದೆ. ಬಿದ್ದು ಬಿದ್ದು ನಕ್ಕು ಹೊಟ್ಟೆ ಇಡ್ಕೊತು. ಇವತ್ತೇ ಹೋಗಿ ನೋಡಿ ಜೋಕರ್ ಅಂತೂ Excellent. ತುಂಬಾ ನಗುತ್ತಾನೆ... ನಿಮ್ಮೆಲ್ಲ ಬೇಜಾರನ ಕಳಿತಾನೆ. He is your Medicine."

 

ಡಾಕ್ಟರ್ ಆಡಿದ ಮಾತುಗಳನ್ನು ಕೇಳಿದ ವ್ಯಕ್ತಿ ಹೇಳಿದ "ಸಾರ್... ಜೋಕರ್ ನಾನೇ ಸಾರ್"

 

ನಮ್ಮ ನಿಮ್ಮ ಜೀವನಗಳಲ್ಲೂ ಅಷ್ಟೇ, ಅದೆಷ್ಟೋ ಬಾರಿ ನಾವುಗಳು ಬೇರೆಯವರಿಗೆ ಖುಷಿ ಕೊಟ್ಟು ಅವರ ಬೇಜಾರುಗಳನ್ನೆಲ್ಲ ಕಳೆದು ಸಂತೋಷದ ಸಕಾರಾತ್ಮಕ ಭಾವಗಳನ್ನು ತುಂಬುವ "ಜೋಕರ್" ಗಳಾಗಿರುತ್ತೇವೆ. ಆದರೆ ನಮ್ಮೊಳಗೆ ಸಾಕಷ್ಟು ನೋವು ದುಗುಡುಗಳಿರುತ್ತಾವೆ. ದುಃಖ ನೋವುಗಳ ಸಮಸ್ಯೆಗೆ ಧೈರ್ಯ ಮಾಡಿ ಪರಿಹಾರ ಕಂಡುಕೊಳ್ಳಲು ಹೊರಟರೆ ಸಿಗುವ ಉತ್ತರನಮಗೆ ನಾವೇ Medicine.

 

ನಮಸ್ಕಾರ

ಎಂದೆಂದಿಗೂ ನಿಮ್ಮವ,

ಮಹೇಶ್ ಬಿ ಜೋಗಿ

 

Comments