ಲಕ್ಷ್ಮಕ್ಕ

“ಸದಾನಂದ ನಿವಾಸ” ಬಿಲ್ಡಿಂಗ್ ಕೆಳಗಡೆ ಹಸಿರು ಕೋಟು ತೊಟ್ಟು ಬಾಯ್ ತುಂಬಾ ಎಲೆ ಅಡಿಕೆ ಆಗಿಯುತ್ತಾ ತಲೆ ತುಂಬಾ ಹೂವ ಮುಡಿದು ಕೂತಿದ್ದ ಲಕ್ಷ್ಮಕ್ಕಯಾವಾಗಲೂ ಕೆಲಸ ಮುಗಿಸಿ ದಣಿವಾರಿಸಿಕೊಳ್ಳಲು ಅಲ್ಲೇ ಕೂಡುತ್ತಿದ್ದಿದ್ದು. ಒಂದೊಂದಿನ ಕೆಲಸ ಬೆಳಿಗ್ಗೆ ಹತ್ತು ಹತ್ತುವರೆಗೆಲ್ಲ ಮುಗಿಯುತ್ತಿದ್ರೆ ಒಂದೊಂದಿನ ಮಧ್ಯಾಹ್ನ ಹನ್ನೆರಡು ಒಂದು ಗಂಟೆಯಾದರೂ ಮುಗಿಯುತ್ತಿರಲಿಲ್ಲ. ಬೆಳಗ್ಗೆ ಆರರಿಂದಲೇ ಬೀದಿಯನ್ನೆಲ್ಲ ಗೂಡಿಸಿ ಕಸ ಎತ್ತಿ ಸುಸ್ತಾಗಿರುತ್ತಿದ್ದ ಲಕ್ಷ್ಮಕ್ಕಕಲ್ಲ್ ಮೆಟ್ಟಿಲ ಮೇಲೆ ಕೂತು ಹೋಗಿ ಬರುವವರನ್ನು ನೋಡುತ್ತಾ ದಣಿವಾರಿಸಿಕೊಳ್ಳುತ್ತಿದ್ದಳು. ಅಸಲಿಗೆ ಲಕ್ಷ್ಮಮ್ಮನ ಹೆಸರು ಲಕ್ಷ್ಮಕ್ಕಅಲ್ಲ. ನರಸಮ್ಮ ಅಂತ. ಅದು ಯಾಕೋ ಏನೋ ಗೊತ್ತಿಲ್ಲ ಎಲ್ಲರೂ ಅವಳನ್ನ ಪ್ರೀತಿಯಿಂದ ಲಕ್ಷ್ಮಕ್ಕಲಕ್ಷ್ಮಕ್ಕಎಂದೇ ಕರೆಯುತ್ತಿದ್ದರು. ಯಾರಾದರೂ ದಾರಿಲಿ ಲಕ್ಷ್ಮಮ್ಮಂಗೆ ತಗೋ ಅಂತ ಹತ್ತೊ ಇಪ್ಪತ್ತೊ ಕೊಡಕ್ ಬಂದ್ರೆ “ಬ್ಯಾಡ ಸಾಮಿ” ಅಂತ ಹೇಳಿ ನಗುತ್ತಾ ಮುಂದೆ ನಡೆದು ಬಿಡುತ್ತಿದ್ದಳು. “ಲಕ್ಷ್ಮಕ್ಕಹಳೆ ಬಟ್ಟೆಗಳಿದವೇ ಯಾವಾಗಾದ್ರೂ ಬಂದು ಇಸ್ಕೊ” ಅಂದ್ರೆ “ಉನ್ರಮ್ಮ ಉನ್ರಮ್ಮ… ಮೊಮ್ಮಕ್ಕಳಿಗೆ ಆಗ್ತಾವೆ… ಕೆಲಸ ಮುಗ್ಸಿ ಇಸ್ಕೊಂಡು ಒಯ್ತಿನಿ ಕಣ್ರಮ್ಮ” ಅನ್ನೋಳು. ದಸರಾ ದೀಪಾವಳಿ ಸಂಕ್ರಾಂತಿ ಹೀಗೆ ಹಬ್ಗಳಿಗೆ ಜನ ಗಾಡಿ ಪೂಜೆ ಅಂಗಡಿ ಪೂಜೆ ಮಾಡಿ ಪ್ರೀತಿಯಿಂದ ತಗೋ ಲಕ್ಷ್ಮಕ್ಕ ಅಂತ ಒಂದು ನೂರು ರೂಪಾಯಿ ಕೊಡಕ್ಕೆ ಬಂದರೆ “ಬ್ಯಾಡ ಸಾಮಿ… ಬೇಡಮ್ಮ… ಟೀಗೆ ಅಂತ ಹತ್ತೊ ಇಪ್ಪತ್ತೊ ಕೊಡ್ರಿ ಸಾಕು…” ಅನ್ನೋವಳು. ಹಬ್ಬದ ದಿನಗಳಲ್ಲಿ ಧರ್ಮ ಕರ್ಮ ಮಾಡೊ ಜನರಿಗೆ ಬೇಜಾರು ಮಾಡ್ಬಾರ್ದು ಅಂತ ಬೇಡ ಅನ್ನದೆ ಸೌಜನ್ಯಕ್ಕೆ ಹೀಗೆ ಹತ್ತೊ ಇಪ್ಪತ್ತೊ ಕೊಡ್ರಿ ಸಾಕು ಅನ್ನುವಳು. ಅದೇ ಹಬ್ಬ ಮುಗುದು ಒಂದಿನ ಎರಡು ದಿನ ವಾರ ಕಳೆದ ಮೇಲೂ ಮಿಕ್ಕಿರುವ ಪಕ್ಕಿರೊ ಕಳ್ಳೆಪುರಿ ಸ್ವೀಟ್ಸ್ ಕೊಟ್ಟರೆ ದುರಹಂಕಾರ ಆಡದೆ “ಮನೇಲಿ ಮಕ್ಕಳು ತಿಂತಾವೆ” ಅಂದ್ಕೊಂಡು ತಗೊಂಡ್ ಹೋಗೊಳು. ಯಾರಾದ್ರೂ ದಾರಿಲಿ “ಬಾರಮ್ಮ ಟೀ ಕೊಡಿಸ್ತೀನಿ” ಅಂದ್ರೆ “ಬ್ಯಾಡ ಸಾಮಿ, ಎಲೆ ಅಡಿಕೆ ಅಕಂಡಿದೀನಿ…” ಅನ್ನೋಳು ಲಕ್ಷ್ಮಕ್ಕ. ಅದೇ “ಸದಾನಂದ ನಿವಾಸ”ದ ರಿಟೈರ್ಡ್ ಸಬ್ ಇನ್ಸ್ಪೆಕ್ಟರ್ ಬಸಣ್ಣ ಏನಾದರೂ “ಬಾಮ್ಮ ಲಕ್ಷ್ಮಕ್ಕ… ಅಲ್ ಯಾಕ್ ಕೂತಿದ್ದೀಯಾ? ಮೇಲ್ ಕೂತ್ಕೋ ಬಾ…” ಅಂದ್ರೆ “ಇರಲಿ ಬಿಡಿ ಸಾಮಿ, ಊರೆಲ್ಲ ಸುತ್ಕೊಂಡ್ ಬಂದಿದೀನಿ… ಇಲ್ಲೇ ಆರಾಮಾಗೈತೆ…” ಅನ್ನೊಳು. ಬಸಣ್ಣನ ಹೆಂಡ್ತಿ ಮಂಜಕ್ಕ ಲಕ್ಷ್ಮಕ್ಕ ಕೂತಿದ್ದಾಳೆ ಅಂತ ಗೊತ್ತಾದ್ರೆ ಸಾಕು ಟೀ ಮಾಡೋಕೆ ಇಟ್ಟು ಎರಡನೇ ಮಹಡಿ ಬಾಲ್ಕನಿಯಿಂದ “ಲಕ್ಷ್ಮಕ್ಕೋ… ಬಾ ಟೀ ಕುಡಿಯೋಣ…” ಅಂತ ಕೂಗೋಳು. ಇದೇನು ಹೊಸದಲ್ಲ. ಲಕ್ಷ್ಮಕ್ಕ ಕೆಳಗೆ ಕೂತೇ ತಲೆ ಎತ್ತಿ “ಇರ್ಲಿ ಮಂಜಕ್ಕ…” ಅಂದ್ರೆ ಮೇಲಿಂದ ಮಂಜಕ್ಕ “ಸರಿ ಇರು ಬಸವಣ್ಣನ ಕೈಯಲ್ಲಿ ಕಳಿಸ್ತೀನಿ…” ಅಂತ ಮತ್ ಕೂಗೊಳು. ಒಂದು ದೊಡ್ಡ ಗ್ಲಾಸ್ ನಲ್ಲಿ ಟೀ ಉಯ್ದು ಅದರ ಜೊತೆಗೆ ಎರಡು ಚಿಕ್ ಚಿಕ್ ಕ್ಲಾಸ್ ಒಂದು ಬಿಸ್ಕೆಟ್ ಪ್ಯಾಕೆಟನ್ನ ಬಸಣ್ಣನ ಕೈಗಿಟ್ಟು “ಎಲ್ಲ ನೀನೆ ತಿಂದ್ಕೊಂಡ್ಬಿಡಬೇಡ. ಅವಳಿಗೆ ಅರ್ಧ ನಿನಗಾರ್ದ… ತಗೋ ಇಬ್ಬರು ಕೆಳಗೆ ಕುತ್ಕೊಂಡು ಕುಡೀರಿ” ಅಂತ ಹೇಳಿ ಕಳ್ಸೋಳು. ಕೆಳಗೆ ಬಸಣ್ಣ ಲಕ್ಷ್ಮಕ್ಕ ಟೀ ಕುಡಿತ ಕಷ್ಟ ಸುಖ ಮಾತಾಡೋರು. ಲಕ್ಷ್ಮಕ್ಕ ಯಾವಾಗ್ಲೂ ಬಸಣ್ಣ ಮಂಜಕ್ಕನ ಮಗನ ಬಗ್ಗೆ “ಸಾಮಿ, ಸಾಮಿ ಚೆನ್ನಾಗೌರ ಸಾಮಿ…” ಅಂತ ವಿಚಾರಿಸೋಳು. ಟೀ ಕುಡಿದ್ಮೇಲೆ ಎಷ್ಟೇ ಬೇಡ ಅಂದ್ರು ಬೀದಿ ಕೊಳಾಯಲ್ಲಿ ಮೂರು ಗ್ಲಾಸನ್ನು ತಾನೇ ತೊಳೆದು ಕೊಟ್ಟು “ಬತ್ತೀನಿ ಸಾಮಿ… ದೇವರು ನಿಮ್ನ ಚೆನ್ನಾಗಿಟ್ಟಿರಲಿ…” ಅಂತ ಹೇಳಿ ಹೊರಟು ಬಿಡೋಳು. 


ಹೀಗಿರುವಾಗ ಅದು ಎರಡು ಸಾವಿರದ ಇಪ್ಪತ್ತು. ಇತಿಹಾಸ ಎಂದೂ ಮರೆಯಬಾರದಂತ ವರ್ಷ. ಅದು ಕರೋನಾ ಮಹಾಮಾರಿ ಮನುಕುಲಕ್ಕೆ ನಡುಕ ಹುಟ್ಟಿಸಿದಂತ ವರ್ಷ. ಸರ್ಕಾರ ಲಾಕ್ಡೌನ್ ಹೇರಿತು. ಕೆಲಸ ಕಾರ್ಯಗಳು ಸ್ಥಗಿತಗೊಂಡವು. ಈಗ ಜೀವಕ್ಕಿಂತ ಮಿಗಿಲಾದ ಕೆಲಸ ಯಾವುದೂ ಇರಲಿಲ್ಲ. ಜನರಿಗೆ ಜೀವ ಉಳಿಸಿಕೊಂಡರೆ ಸಾಕಾಗಿತ್ತು. ಆದರೆ ದಿನನಿತ್ಯ ಕಾಲರಾ ಡೆಂಗ್ಯೂ ಮಲೇರಿಯಂತಹ ಕಣ್ಣಿಗೆ ಕಾಣದಂತ ಅದೆಷ್ಟೋ ರಾಕ್ಷಸರೊಂದಿಗೆ ಮಕ್ಕಳು ಆಟ ಆಡುವಂತೆ ಹೋರಾಡುವ ಪೌರಕಾರ್ಮಿಕರಿಗೆ ಮಾತ್ರ ಈ ಕರೋನಾ ಮತ್ತೊಂದು ಕಣ್ಣಿಗೆ ಕಾಣದಂತಹ ರಾಕ್ಷಸ ಅಷ್ಟೇ ಆಗಿದ್ದು ಅವರಿಗೆ ಯಾವ ಲೊಕ್ಡೌನು ಇರಲಿಲ್ಲ ಅವರ ಯಾವ ಕೆಲಸ ಕಾರ್ಯಗಳು ನಿಲ್ಲಲಿಲ್ಲ. ಬದಲಿಗೆ ಇನ್ನೂ ಹೆಚ್ಚಾದವು. ಇವರು ಮಾಡುವ ಈ ಹೋರಾಟವನ್ನು ಎಂದೂ ನೋಡದ ಜನ ಈಗ ಇವರನ್ನು “ಕರೋನ ವಾರಿಯರ್ಸ್” ಅಂತ ಬಿರುದುಕೊಟ್ಟು ಕರೆಯೋಕೆ ಶುರು ಮಾಡಿದ್ದರು. ಬೆಳಗ್ಗೆ ಬೇಗನೆ ಸರ್ಕಾರ ನಿಗದಿಪಡಿಸಿ ದಂತಹ ಸಮಯದೊಳಗೆ ಮನೆ ಮನೆ ಕಸವನ್ನು ತೆಗೆದುಕೊಂಡು ಬೀದಿ ಕಸವನ್ನೆಲ್ಲ ಗೂಡಿಸಿ ಮುಗಿಸಿರಬೇಕಾಗಿತ್ತು. ಇದರ ಜೊತೆ ಜೊತೆಗೆ “ಸಾಮಾಜಿಕ ಅಂತರ” ಕಾಯ್ದು ಕೊಳ್ಳಬೇಕಾಗಿತ್ತು. ಈ “ಸಾಮಾಜಿಕ ಅಂತರ” ಕಾಯ್ದುಕೊಳ್ಳುವ ಹೊಸ ನಿಯಮ ಪೌರ ಕಾರ್ಮಿಕರಿಗೆ ಹೊಸದೇನು ಆಗಿರಲಿಲ್ಲ. ಇಷ್ಟು ದಿನ ಹೇಳದೆ ಪೌರವ ಕಾರ್ಮಿಕರೊಂದಿಗೆ ಅದೆಷ್ಟೋ ಜನ “ಸಾಮಾಜಿಕ ಅಂತರ” ಕಾಯ್ದುಕೊಳ್ಳುವ ಪದ್ಧತಿಯನ್ನು ಇಟ್ಟುಕೊಂಡಿದ್ದರು. ಆದರೆ ಈಗ ಅದು ಅನಿವಾರ್ಯವಾಗಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಂದು ಸರಿಯಾದ ಕಾರಣವಿತ್ತು ಅಷ್ಟೇ. ಮಂಜಕ್ಕನಿಗೆ ಒಂದು ಅಭ್ಯಾಸ. ನಿತ್ಯ ಬೆಳೆಗೆ ಮನೆಯ ಮುಂದೆ ಕಸಗುಡಿಸಿ ನೀರಾಕಿ ರಂಗೋಲಿ ಬಿಟ್ಟರೆ ಮಾತ್ರ ಅವಳಿಗೆ ದಿನಪೂರ್ತಿ ಸಮಾಧಾನ. ಹೀಗಿರುವಾಗ ಕರೋನಾದಂತ ಸಮಯದಲ್ಲೂ ಮನೆ ಮುಂದೆ ಗುಡಿಸಿ ಸಾರ್ಸಿ ಒಂದು ಪುಟ್ಟ ರಂಗೋಲಿಯನ್ನಾದರೂ ಬಿಡದೆ ಇದ್ದರೆ ಅವಳಿಗೆ ಸಮಾಧಾನವೇ ಇರುತ್ತಿರಲಿಲ್ಲ. ಹೀಗಿರುವಾಗ ಲಕ್ಷ್ಮಕ್ಕ “ಅಯ್ಯೋ ಕೊರೋನಾ ಟೈಮಲ್ಲಿ ನೀನ್ಯಾಕಕ್ಕ ಕೆಳಗೆ ಬಂದು ಕಸ ಗೂಡುಸ್ಕೊಂಡು ಕುತ್ಕೊಳ್ತಿಯಾ… ನಾನೇ ಕಸಗೂಡಿಸಿರ್ತೀನಿ ನೀನು ಸುಮ್ನೆ ಬಂದು ನಿನ್ನ ಸಮಾಧಾನಕ್ಕೆ ಒಂದು ಚಿಕ್ಕ ರಂಗೋಲಿ ಹಾಕೊಗು” ಅನ್ನೋಳು. ಹೀಗೆ ಇಪ್ಪತ್ತೊಂದು ದಿನ ಇದ್ದ ಲಾಕ್ ಡೌನ್ ಮತ್ತೆ ಮುಂದುವರಿತು. ಹೀಗೆ ಒಂದಿನ ಸುದ್ದಿ ಬಂತು ಲಕ್ಷ್ಮಕ್ಕಂಗೆ ಕೊರೋನಾ ಆಗಿ ಆಸ್ಪತ್ರೆಗೆ ಹಾಕೋವರೆ ಅಂತ. ಮಾರನೇ ದಿನ ಲಕ್ಷ್ಮಕ್ಕ ಇನ್ನಿಲ್ಲ ಅಂತ ಸುದ್ದಿ ಬಂತು. ವಿಷಯ ಕೇಳಿ ಮಂಜಕ್ಕ ಕಣ್ಣೀರ್ ಹಾಕುದ್ಲು. ಬಸಣ್ಣನಿಗೆ “ಹೋಗು ಲಕ್ಷ್ಮಕ್ಕನ ಕೊನೆ ಬಾರಿ ನೋಡ್ಕೊಂಡ್ ಬಾ…” ಅಂದ್ಲು. “ಮಂಜಿ… ಇದು ಕರೋನಾ. ಪಾಪ ಅವರ ಮನೆಯವರೇ ಅವಳ ಮುಖ ನೋಡಿರ್ತಾರೋ ಇಲ್ವೋ. ಎಲ್ ಕೊಡ್ತಾರೆ ಅವಳ್ನ ಇನ್ನ… ಆಸ್ಪತ್ರೆಯಿಂದ ಮನೆಗೆ ಬರಲ್ಲ…” ಅಂತ ಹೇಳಿ ಮಂಜಕ್ಕಂಗೆ ಸಮಾಧಾನ ಮಾಡಿದ್ರು ಬಸಣ್ಣ. ಬಸ್ಸಣ್ಣಂಗೆ ಲಕ್ಷ್ಮಕ್ಕನ ಮನೆ ಗೊತ್ತಿತ್ತು. ಲಾಕ್ಡೌನೆಲ್ಲ ಮುಗುದ್ಮೇಲೆ ಬಸ್ಸಣ್ಣ ಲಕ್ಷ್ಮಕ್ಕನ ಮನೆ ಕಡೆ ಹೋಗಿದ್ರು. ಲಕ್ಷ್ಮಕ್ಕ ಅವರ ಗಂಡನ ಕೆಲ್ಸಕ್ಕೆ ಅನುಕಂಪದ ಆಧಾರದ ಮೇಲೆಬಂದಿದ್ದು. ಲಕ್ಷ್ಮಕ್ಕಂಗೆ ಒಂದು ಗಂಡು ಒಂದು ಹೆಣ್ಣು. ಮಗಳ ಹೊಟ್ಟೆಯಲ್ಲಿ ಎರಡು ಮೊಮ್ಮಕ್ಕಳನ್ನು ಕಂಡಿದ್ದಳು. ಲಕ್ಷ್ಮಕ್ಕನ ಮಗ ಬಸಣ್ಣನ ನೋಡ್ತಿದ್ದಂಗೆ “ಬಂದ್ರಣ್ಣ ಬಂದ್ರಣ್ಣ…” ಅಂದ. “ನಿಮ್ಮಮ್ಮ ಬಾಳ ಒಳ್ಳೆ ಹೆಂಗ್ಸು… ಇಷ್ಟ್ ಬೇಗ ಹೋಗ್ಬಾರದಾಗಿತ್ತು…” ಅಂತ ಬಸಣ್ಣ ಹೇಳುತ್ತಿರುವಾಗ ಲಕ್ಷ್ಮಕ್ಕನ ಮಗನ ಕಣ್ಣಲ್ಲಿ ನೀರಿತ್ತು. ಲಕ್ಷ್ಮಕ್ಕನ ಕೆಲಸ ಅವರ ಮಗನಿಗೆ ಕೊಟ್ರಂತೆ. ಒಂದ್ ಸ್ವಲ್ಪ ಹೊತ್ತು ಮಾತಾಡಿ ಹೊರಡುವಾಗ ಬಸಣ್ಣ ಮಂಜಕ್ಕ ಕೊಟ್ಟ ಕಳಿಸಿದ್ದ ಐನೂರು ಐನೂರು ರೂಪಾಯಿ ನಾಲ್ಕು ನೋಟ್ಗಳನ್ನ “ಖರ್ಚುಗೆ ಇಟ್ಕೋ” ಅಂತ ಕೊಡಕ್ ಹೋದಾಗ ಲಕ್ಷ್ಮಕ್ಕನ ಮಗ ಅವರಮ್ಮನಂತೆ ನಗುತ್ತಾ “ಇಲ್ಲ ಬೇಡ ಬೇಡ” ಅನ್ನುತ್ತಾ ಹಿಂದೆ ಸರಿದ. ಇರಲಿ ಇಟ್ಕೋಂದಾಗ ಲಕ್ಷ್ಮಕ್ಕನ ಮಗ “ಅಯ್ಯೋ ಹೇಳದೆ ಮರೆತೋಯ್ತು. ಮುನ್ಸಿಪಾಲ್ಟಿಯವರು ಕೊರೋನಾದಿಂದ ಸತ್ತಿದ್ದಕ್ಕೆ ಮುವತ್ತು ಲಕ್ಷ ಕೊಟ್ರು. ಅದರಲ್ಲಿ ಅಕ್ಕಂಗೆ ಹತ್ತು ಲಕ್ಷ ಕೊಟ್ವಿ, ಬಾಡಿಗೆಗೆ ಇದ್ದ ಮನೆನಾ ಹತ್ತು ಲಕ್ಷ ಲೀಸೆಗೆ ಹಾಕೊಂಡ್ವಿ, ಇನ್ಮಿಕ್ಕಿದ್ದ ಏಳುವರೆ ಎಂಟು ಲಕ್ಷ ಎಫ್ ಇಟ್ಟಿದೀವಿ ಅಣ್ಣ. ದೇವರ ದಯೆಯಿಂದ ದುಡ್ಡು ಕಾಸಿಗೆ ಈಗ ತೊಂದರೆ ಇಲ್ಲ” ಅಂದ. ಲಕ್ಷ್ಮಕ್ಕನ್ನ ನರ್ಸಮ್ಮ ಅನ್ನದೆ ಲಕ್ಷ್ಮಕ್ಕ ಲಕ್ಷ್ಮಕ್ಕ ಅಂತ ಯಾಕೆ ಅಂತಿದ್ರು ಅಂತ ಬಸಣ್ಣಂಗೆ ಅರ್ಥ ಆಯ್ತು. ಗೋಡೆ ಮೇಲೆ ನೇತಾಕಿದ್ದ ಹಸಿರು ಸಮವಸ್ತ್ರದ ಪಕ್ಕದಲ್ಲಿದ ನಗುಮುಖದ ಲಕ್ಷ್ಮಕ್ಕನ ಫೋಟೋ ನೋಡಿ ಮುಗುಳ್ನಗುತ್ತಾ ಮನೆ ಕಡೆಗೆ ಹೆಜ್ಜೆ ಹಾಕುದ್ರು ಬಸಣ್ಣ.


ಎಂದೆಂದಿಗೂ ನಿಮ್ಮವ,
ಮಹೇಶ್ ಬಿ ಜೋಗಿ







Comments